

ವಿಜಯವಾಣಿ ಸುದ್ದಿಜಾಲ ಧಾರವಾಡ
ಚಿನ್ನದ ಪದಕ ವಿಜೇತರಿಗೆ ಮಾಸಿಕ ಭತ್ಯೆ ಪರಿಷ್ಕರಣೆ ಮಾಡಲಾಗಿದ್ದು, ಅಪಘಾತ ರಹಿತ ಚಾಲನೆಗೆ ಬೆಳ್ಳಿ ಪದಕ ಹಾಗೂ ಮುಖ್ಯಮಂತ್ರಿ ಬಂಗಾರದ ಪದಕ ಪಡೆದವರ ಭತ್ಯೆಯನ್ನು 10 ಪಟ್ಟು ಹೆಚ್ಚಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸತ್ತೂರಿನ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಜತ ಮಹೋತ್ಸವ ಸಂಭ್ರಮ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
5 ವರ್ಷಗಳ ಅಪಘಾತ ರಹಿತ ಚಾಲನೆಗೆ ನೀಡುವ ಬೆಳ್ಳಿ ಪದಕ ವಿಜೇತರ ಮಾಸಿಕ ಭತ್ಯೆಯನ್ನು 50 ರೂ.ದಿಂದ 500 ರೂ.ಗೆ ಹಾಗೂ 15 ವರ್ಷಗಳ ಅಪಘಾತ ರಹಿತ ಚಾಲನೆಗೆ ಮುಖ್ಯ ಮಂತ್ರಿಗಳ ಬಂಗಾರದ ಪದಕ ಪಡೆದವರಿಗೆ 100 ರೂ.ದಿಂದ 1000 ರೂ.ಗೆ ಹೆಚ್ಚಿಸಲಾಗುವುದು. ಪ್ರಸ್ತುತ ಬೆಳ್ಳಿ ಪದಕ ಮತ್ತು ಚಿನ್ನದ ಪದಕ ವಿಜೇತರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲ ಚಾಲಕ ಹಾಗೂ ನಿರ್ವಾಹಕರಿಗೆ ಪರಿಷ್ಕೃತ ಪ್ರಶಸ್ತಿ ಭತ್ಯೆ ಅನ್ವಯಿಸಿ ಪಾವತಿಗೆ ಅವಕಾಶ ಮಾಡಲಾಗುವುದು ಎಂದರು.
ಸಾರಿಗೆ ಇಲಾಖೆಯಲ್ಲಿ ವಿವಿಧ ಕಾರ್ಯಕ್ರಮ ಮತ್ತು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುವಾಗುವಂತೆ ಪ್ರಸ್ತುತ ಬಜೆಟ್‌ನಲ್ಲಿ ಇಲಾಖೆಗೆ ಮುಖ್ಯಮಂತ್ರಿಗಳು ಸುಮಾರು 1500 ಕೋಟಿ ರೂ.ಹಣ ಹಂಚಿಕೆ ಮಾಡಿದ್ದು, ಈಗಾಗಲೇ ವಾಯವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 150 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಮುಂದಿನ 30 ವರ್ಷಗಳಲ್ಲಿ ಡೀಸೆಲ್ ಬಸ್, ವಾಹನಗಳ ಓಡಾಟವಿರುವುದಿಲ್ಲ. ಸಾರಿಗೆ ಇಲಾಖೆ ಈಗಾಗಲೇ ವಿದ್ಯುತ್ ಚಾಲಿತ ಬಸ್‌ಗಳ ಓಡಾಟ ಆರಂಭಿಸಿದ್ದು, ಕೇಂದ್ರ ಸರ್ಕಾರದ ಸಬ್ಸಿಡಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆಯಿಂದ ಹೆಚ್ಚು ಬಸ್ ಖರೀದಿಸಲಾಗುವುದು. ಇದಕ್ಕೆ ಎಲ್ಲ ಬಸ್ ನಿಲ್ದಾಣಗಳಲ್ಲಿ ವಿದ್ಯುತ್ತೀಕರಣ ಕಾರ್ಯವಾಗಬೇಕಿದೆ. ಈಗಾಗಲೇ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಬಸ್ ನಿಲ್ದಾಣಗಳನ್ನು ವಿದ್ಯುತ್ತೀಕರಣಗೊಳಿಸಿ, ವಿದ್ಯುತ ಚಾಲಿತ ಬಸ್ ಓಡಾಟಕ್ಕೆ ಸಿದ್ಧತೆ ಮಾಡಿಕೊಳ್ಳಲು ಅಂದಾಜು 15 ಕೋಟಿ ರೂ. ನೀಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕರ್ನಾಟಕ ವಿಧಾನ ಪರಿಷರ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಅಬ್ಬಯ್ಯ ಪ್ರಸಾದ, ಎನ್.ಎಚ್. ಕೋನರಡ್ಡಿ ಮಾತನಾಡಿದರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ 122, ಹು-ಧಾ ನಗರ ಸಾರಿಗೆ 11, ಬಾಗಲಕೋಟೆ 48, ಧಾರವಾಡ 57, ಕೇಂದ್ರ ಕಚೇರಿ 4 ಸೇರಿ ಒಟ್ಟು 242 ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು. ಕ್ರೀಡಾ ಸ್ಪರ್ಧೆಗಳ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ವಿವಿಧ ಜನಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು, ಸಿಬ್ಬಂದಿ, ಇತರರು ಇದ್ದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಸ್ವಾಗತಿಸಿದರು. ಮಾಯಾರಾಮನ್ ನಿರೂಪಿಸಿದರು.