

ಮೈಸೂರು: ಸಂಶೋಧನೆಯ ಪ್ರಕಾರ ಮಿತಿ ಮೀರಿದ ಮೊಬೈಲ್ ಬಳಕೆಯಿಂದ ಯುವ ಜನಾಂಗ ಮಾನಸಿಕ ಸ್ತಿಮಿತ ಕಳೆದುಕೊಳ್ಳುತ್ತಿದ್ದು, ಇಂತಹ ಸಂದರ್ಭದಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆ ಹೆಚ್ಚಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಹೇಳಿದರು.
ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಸ್ನಾತಕ ವಿಭಾಗದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿರುವ ಸಂಗತಿ ಸಂಶೋಧನೆಯಿಂದ ಖಚಿತವಾಗಿದೆ. ಹೊಸ ಅವಿಷ್ಕಾರಗಳು ನಡೆದಾಗ ತಂತ್ರಜ್ಞಾನದ ಬಳಕೆಗೆ ಆಕರ್ಷಣೆಗೆ ಒಳಗಾಗುವುದು ಸಹಜ. ಆದರೆ, ತಂತ್ರಜ್ಞಾನದಲ್ಲಿನ ಸಕಾರಾತ್ಮಕ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕೇ ಹೊರತು, ನಕರಾತ್ಮಕ ವಿಚಾರಗಳಿಗಲ್ಲ. ಮೊಬೈಲ್ ಬಳಕೆ ನಕಾರಾತ್ಮಕವಾಗಿದೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ವಿಶ್ವ ಕಪ್ ಫೈನಲ್ ಪಂದ್ಯದ ಕೆಲವು ದಿನಗಳ ಹಿಂದೆ ದೃಶ್ಯ ಮಾಧ್ಯಮಗಳಲ್ಲಿ ಜ್ಯೋತಿಷ್ಯಗಳನ್ನು ಕೂರಿಸಿ ಸೋಲು-ಗೆಲುವಿನ ಭವಿಷ್ಯ, ಆಟಗಾರರ ಕುರಿತು ಭವಿಷ್ಯ ನುಡಿಯುತ್ತಿದ್ದರು. ಕ್ರೀಡಾಲೋಕದಲ್ಲಿ ಜ್ಯೋತಿಷ್ಯ ತುಳುಕು ಹಾಕುವ ಮೂಲಕ ಸಿದ್ಧಾಂತ ತಪ್ಪು ಹಾದಿಗೆ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಿಗರು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಂಖ್ಯೆ ಕ್ಷೀಣಿಸುತ್ತಿದೆ. ಈ ಕುರಿತು ನಾಡಿನ ಜನತೆ ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ಈ ಹಿಂದೆ ಕೊಡಗಿನಲ್ಲಿ ಮನೆಗೊಬ್ಬ ಸೈನಿಕನಿರಬೇಕು ಎಂಬ ಪದ್ಧತಿ ಇತ್ತು. ಆದರೀಗ ಅದು ಕೂಡ ಕ್ಷೀಣಿಸುತ್ತಿದೆ. ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುವುದರಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ ಎಂದರು.
ಆಮೆರಿಕದಲ್ಲಿ ಪರಿಪೂರ್ಣ ಭಾಷೆಯ ಕುರಿತು ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಹೊರ ಹೊಮ್ಮಿದ ಮೂರು ಪರಿಪೂರ್ಣ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಈ ಸ್ಪರ್ಧೆಯಲ್ಲಿ 7113 ಭಾಷೆಗಳನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಇವುಗಳಲ್ಲಿ 3600ಕ್ಕೂ ಹೆಚ್ಚು ಭಾಷೆಗೆ ಲಿಪಿ ಇರಲಿಲ್ಲ. ಕಠಿಣ ಮಾನದಂಡಗಳಲ್ಲಿ ನಡೆದ ಸಂಶೋಧನೆಯ ಪ್ರಕಾರ ಇಂಗ್ಲಿಷ್ ಕೆಲವು ಪದಗಳು ಸಮಯಕ್ಕೆ ತಕ್ಕಂತೆ ಬದಲಾಗುವ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಇಂಗ್ಲಿಷ್ ಭಾಷೆ ಕೂಡ ಈ ಸಂಶೋಧನೆಯಲ್ಲಿ ಕಸದ ಮುಟ್ಟಿಗೆ ಸೇರಿತು. ಈ ಸಂಶೋಧನೆ ಕನ್ನಡದ ಐತಿಹಾಸಿಕ ಪರಂಪರೆಗೆ ಜಗತ್ತಿಗೆ ಸಾರಿ ಹೇಳಿತು. ಹೀಗಾಗಿ ಕನ್ನಡಿಗರಾಗಿ ಜನಿಸಲು ಪುಣ್ಯ ಮಾಡಿರಬೇಕು. ಅದರದಲ್ಲಿಯೂ ಕನ್ನಡ ಮಾತೃಭಾಷೆಯಾದರೆ ಅದಕ್ಕಿಂತ ದೊಡ್ಡ ಪುಣ್ಯ ಮತ್ತೊಂದಿಲ್ಲ. ಆದರೆ, ಇಲ್ಲಿನವರಿಗೆ ಇಂಗ್ಲಿಷ್ ವ್ಯಾಮೋಹ ಕಡಿಮೆಯಾಗುತ್ತಿಲ್ಲ ಎಂದರು.
ನಗರಪಾಲಿಕೆ ಉಪ ಆಯುಕ್ತ ಜಿ.ಎಸ್.ಸೋಮಶೇಖರ್, ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ನಿವೃತ್ತ ಅಧ್ಯಕ್ಷ ಪ್ರೊ.ಎಂ.ಚಂದ್ರಕುಮಾರ್, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಪ್ರಾಂಶುಪಾಲೆ ಡಾ.ಎಸ್.ಪ್ರತಿಭಾ ಇದ್ದರು.