

ಶಿವಮೊಗ್ಗ: ಸಾಮಾಜಿಕ ಜಾಲತಾಣಗಳು ಆರಂಭಗೊಂಡ ಬಳಿಕ ಮಕ್ಕಳು ವ್ಯಸನಿಗಳಾಗುತ್ತಿದ್ದು ಈ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಎಚ್ಚರ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬಿಂದುಮಣಿ ಹೇಳಿದರು.
ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವರಕ್ಷಾ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಇದರಿಂದ ಹೊರಬರಲು ಪಾಲಕರು ಮತ್ತು ಶಿಕ್ಷಕರು ಪ್ರಯತ್ನಿಸಬೇಕಾಗಿದೆ. ಮಕ್ಕಳ ಚಟುವಟಿಕೆಗಳ ಬಗ್ಗೆ ಸದಾ ಎಚ್ಚರದಿಂದ ಇರಬೇಕು ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ 18 ವರ್ಷದೊಳಗಿನವರು ಖಾತೆ ತೆರೆಯುವುದು ಕಾನೂನು ಬಾಹಿರವಾಗಿದೆ. ಮಕ್ಕಳು ಈ ರೀತಿ ಖಾತೆ ತೆರೆದಿದ್ದರೆ ತಕ್ಷಣವೇ ಡಿಲಿಟ್ ಮಾಡಬೇಕು. ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ತೀರ ಅವಶ್ಯಕತೆಯಿದ್ದರೆ ತಮ್ಮ ಪಾಲಕರ ಖಾತೆಯಲ್ಲಿಯೇ ವೀಕ್ಷಿಸಬಹುದು. ಅದನ್ನು ಬಿಟ್ಟು ತಾವೇ ಖಾತೆ ತೆರೆಯುವುದು ಅಪರಾಧವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮೊಬೈಲ್ ಹೆಚ್ಚು ಬಳಸುವುದರಿಂದ ಮಿದುಳಿನ ಸಾಮರ್ಥ್ಯ ಕಡಿಮೆಯಾಗುತ್ತದೆ. ಕಣ್ಣುಗಳಿಗೆ ತೊಂದರೆಯಾಗುತ್ತದೆ. ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅನವಶ್ಯಕವಾಗಿ ಬೆಟ್ಟಿಂಗ್‌ನಂತಹ ಜೂಜಾಟಕ್ಕೂ ಒಳಗಾಗಿ ಬದುಕನ್ನೇ ನಾಶ ಮಾಡಿಕೊಳ್ಳಬೇಕಾಗುತ್ತದೆ. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಹೊಸಬರ ಸ್ನೇಹ ಮಾಡಬಾರದು. ವೈಯಕ್ತಿಕ ವಿವರಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು. ಲೊಕೇಶನ್‌ಗಳನ್ನು ಕಳುಸಬಾರದು. ಕಿರಿಕಿರಿಯಾದರೆ ಅವರನ್ನು ಬ್ಲಾಕ್ ಮಾಡಿ ಅಥವಾ ಪಾಲಕರಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಪಾಲಕರು ಕೂಡ ಮಕ್ಕಳ ಚಲನವಲನಗಳ ಬಗ್ಗೆ ನಿಗಾ ವಹಿಸಬೇಕು. ಮಕ್ಕಳು ತಂದೆ-ತಾಯಿಗಳಿಗೆ ಗೌರವ ಕೊಡಬೇಕು. ಎದುರು ಮಾತನಾಡದೆ ಓದಿನ ಕಡೆ ಗಮನಹರಿಸಬೇಕು. ತಂದೆ ತಾಯಿಗಳ ಕಷ್ಟಗಳನ್ನು ಅರಿತುಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು. ತರಗತಿಗಳಿಗೆ ಗೈರುಹಾಜರಾಗಬಾರದು. ರಾತ್ರಿ ಒಬ್ಬರೇ ಓಡಾಡಬಾರದು. ಅಕಸ್ಮಾತ್ ತೊಂದರೆಯ ಸನ್ನಿವೇಶವಿದ್ದಾಗ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ಸಾಧನೆಗೆ ಸಾಕಷ್ಟು ದಾರಿಗಳಿದ್ದು ಮಕ್ಕಳ ಅಭಿವೃದ್ಧಿಗಾಗಿ ಸಂಸ್ಥೆ ಹಲವು ಕಾರ್ಯಕ್ರಮ ಆಯೋಜಿಸುತ್ತಿದೆ. ಬಿಂದುಮಣಿ ಅವರು ಮಕ್ಕಳೊಡನೆ ಮಕ್ಕಳಾಗಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಪ್ರಾಚಾರ್ಯೆ ಸುನೀತಾದೇವಿ ಮಾತನಾಡಿ, ಬಹಳ ಮಕ್ಕಳು ಮೊಬೈಲ್ ಕೊಡದಿದ್ದರೆ ಊಟ ಬಿಡುವುದು, ಮನೆ ಬಿಟ್ಟು ಹೋಗುವುದು, ಬೆದರಿಕೆ ಹಾಕುವುದು, ಎದುರು ಉತ್ತರ ಕೊಡುವುದು ಮಾಡುತ್ತಿದ್ದಾರೆ. ಅನೇಕ ಪಾಲಕರು ಈ ಬಗ್ಗೆ ತಮಗೆ ದೂರು ನೀಡಿದ್ದಾರೆ. ಎಲ್ಲರೂ ಮೊಬೈಲ್‌ಗಳನ್ನು ಅಗತ್ಯ ಮತ್ತು ಅವಶ್ಯಕತೆಗೆ ತಕ್ಕಂತೆ ಉಪಯೋಗಿಸಿ ಎಂದರು. ಉಪ ಪ್ರಾಚಾರ್ಯ ಪ್ರದೀಪ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.