ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚಳ

Increase in liquor sales in the district
Published on

ಸುನಿಲ್ ಪೊನ್ನೇಟಿ ಮಡಿಕೇರಿ:

ಪ್ರವಾಸಿ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಕೊಡಗಿನಲ್ಲಿ ವರ್ಷದಿಂದ ವರ್ಷಕ್ಕೆ ಮದ್ಯ ಮಾರಾಟ ಪ್ರಮಾಣದಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ನಡೆಯುವ ಬಹುತೇಕ ಸಮಾರಂಭಗಳಲ್ಲಿ ಮದ್ಯ ಬಳಕೆ ಸಾಮಾನ್ಯವಾಗಿದ್ದು, ಸಮಾರಂಭಗಳಲ್ಲಿನ ಅದ್ಧೂರಿತನ ಮದ್ಯ ಮಾರಾಟ ಜಾಸ್ತಿಯಾಗಲು ಒಂದು ಕಾರಣವಾದರೆ, ಪ್ರವಾಸಿಗರ ಸಂಖ್ಯೆ ಏರುಗತಿಯಲ್ಲಿ ಇರುವುದು ಕೂಡ ಭರ್ಜರಿ ’ಎಣ್ಣೆ’ ವ್ಯಾಪಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೊಡಗು ಪುಟ್ಟ ಜಿಲ್ಲೆಯಾದರೂ ಮದ್ಯ ಮಾರಾಟದಲ್ಲಿ ರಾಜ್ಯಕ್ಕೆ ದೊಡ್ಡ ಮಟ್ಟದ ಆದಾಯ ತಂದುಕೊಡುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ಅಲ್ಪ ಹಿನ್ನಡೆ ಆದರೂ ಉಳಿದಂತೆ ಅಬಕಾರಿ ಇಲಾಖೆಗೆ ಕೊಡಗು ಅಕ್ಷರಶಃ ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದಂತೆಯೇ ಸರಿ. ಸಾಮಾನ್ಯವಾಗಿ ಮದ್ಯ ಮಾರಾಟ ಇಲ್ಲಿ ಹೆಚ್ಚು ಇರುತ್ತದೆ. ಮದ್ಯ ಸೇವನೆ ಇಲ್ಲಿಯ ಬಹುತೇಕರ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಜಿಲ್ಲೆಯ ತಂಪು ಹವಾಮಾನವೂ ಇದಕ್ಕೆ ಪೂರಕವಾಗಿದ್ದು, ಸಾಂಪ್ರದಾಯಿಕ ಆಚರಣೆಗಳಲ್ಲೂ ಮದ್ಯದ ಬಳಕೆ ಕಂಡುಬರುತ್ತದೆ. ಮದ್ಯ ಪೂರೈಕೆ ಇಲ್ಲ ಎಂದರೆ ಶುಭ ಸಮಾರಂಭಗಳು ಪರಿಪೂರ್ಣ ಆಗುವುದೇ ಇಲ್ಲ. ಎಷ್ಟು ಬಾಕ್ಸ್ ಮದ್ಯ ಖರ್ಚಾಗಿದೆ ಎನ್ನುವುದರ ಆಧಾರದ ಮೇಲೆ ಆ ಸಮಾರಂಭದ ಅದ್ಧೂರಿತನ ಅಳೆಯುವುದೂ ಇದೆ.

ಕೊಡಗು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದ್ದು, ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ, ವಿದೇಶಗಳಿಂದಲೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇಲ್ಲಿಯ ಹವಾಮಾನ, ಸಂಸ್ಕೃತಿ, ಆಹಾರ ಪದ್ಧತಿಗಳು ಮದ್ಯ ಸೇವಿಸಲು ಪೂರಕವಾಗಿರುವುದರಿಂದ ಇಲ್ಲಿಯ ಮುಕ್ತ ವಾತಾವರಣದಲ್ಲಿ ಮದ್ಯಪಾನ ಮಾಡಿ ಎಂಜಾಯ್ ಮಾಡಲೆಂದೇ ಬಹುತೇಕ ಪ್ರವಾಸಿಗರು ಜಿಲ್ಲೆಯ ಪ್ರವಾಸ ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಕಾರ್ಪೋರೇಟ್ ಮೀಟಿಂಗ್‌ಗಳು, ಕಂಪೆನಿಗಳ ಸಂಭ್ರಮಾಚರಣೆಗಳು, ವ್ಯಾವಹಾರಿಕ ಸಭೆಗಳೂ ಇಲ್ಲಿನ ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಇಲ್ಲಿಯೂ ಮದ್ಯ ಬಳಕೆ ಯಥೇಚ್ಛವಾಗಿ ನಡೆಯುತ್ತದೆ.
ಬೇಸಿಗೆ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮದ್ಯ ಮಾರಾಟ ದಾಖಲಾಗುತ್ತದೆ. ನಿಶ್ಚಿತಾರ್ಥ, ಮದುವೆ, ನಾಮಕರಣದಂತಹ ಸಮಾರಂಭಗಳು ಈ ಅವಧಿಯಲ್ಲಿ ಹೆಚ್ಚು ಇರುವುದರಿಂದ ಮದ್ಯ ಬಳಕೆಯೂ ಜಾಸ್ತಿ ಆಗಿರುತ್ತದೆ. ಇದಲ್ಲದೆ ಮಾರ್ಚ್‌ನಿಂದ ಜೂನ್ ತನಕ ಪ್ರವಾಸಿ ಸೀಸನ್ ಕೂಡ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಾರೆ. ಇದರಿಂದಾಗಿಯೂ ಸಹಜವಾಗಿ ಮದ್ಯ ಮಾರಾಟದಲ್ಲಿ ಹೆಚ್ಚಳ ಕಾಣಬಹುದಾಗಿದೆ. ಕೊರೊನಾ ಸಂಕಷ್ಟದ ಅವಧಿಯಲ್ಲಿ ಅಬಕಾರಿ ಇಲಾಖೆಯ ಗುರಿಗಿಂತ ಕಡಿಮೆ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಮದ್ಯ ಮಾರಾಟ ನಡೆದಿತ್ತು. ಆದರೆ ಈಗ ಮದ್ಯ ಮಾರಾಟದ ಪ್ರಮಾಣ ಚೇತರಿಕೆಯ ಹಾದಿಯಲ್ಲಿದ್ದು, ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತಿದೆ. ನಕಲಿ ಮದ್ಯ, ಕಳ್ಳಬಟ್ಟಿ, ಅಕ್ರಮ ಸೇಂದಿ ವ್ಯಾಪಾರಕ್ಕೆ ಅಬಕಾರಿ ಇಲಾಖೆ ಮೂಲಕ ಕಡಿವಾಣ ಹಾಕಿದ್ದರಿಂದಲೂ ಮದ್ಯ ಮಾರಾಟದಲ್ಲಿ ಹೆಚ್ಚಳ ಕಾಣುವಂತಾಗಿದೆ.

೨೦೨೦-೨೧ರಲ್ಲಿ ಜಿಲ್ಲೆಯಲ್ಲಿ ಒಟ್ಟು ೮.೭೫ ಲಕ್ಷ ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದ್ದು, ೩.೧೩ ಲಕ್ಷ ಪೆಟ್ಟಿಗೆ ಬಿಯರ್ ಬಿಕರಿಯಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ೩.೫೭ ಲಕ್ಷ ಪೆಟ್ಟಿಗೆ ಮದ್ಯ ಮಾರಾಟವಾಗಿದ್ದು, ಸೋಮವಾರಪೇಟೆ ತಾಲೂಕಿನಲ್ಲಿ ಬಿಯರ್ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ೧.೧೯ ಲಕ್ಷ ಪೆಟ್ಟಿಗೆಗಳಷ್ಟು ಮಾರಾಟ ಕಂಡಿದೆ. ಮಡಿಕೇರಿ ತಾಲೂಕಿನಲ್ಲಿ ೧.೯೪ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೩.೩೩ ಪೆಟ್ಟಿಗೆ ಮದ್ಯ ಮಾರಾಟವಾಗಿದ್ದರೆ, ಮಡಿಕೇರಿ ತಾಲೂಕಿನಲ್ಲಿ ೮೫ ಸಾವಿರ ಪೆಟ್ಟಿಗೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ೧.೦೮ ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದೆ.
೨೦೨೧-೨೨ರಲ್ಲಿ ಕೊಡಗಿನಲ್ಲಿ ಒಟ್ಟು ೯.೮೦ ಲಕ್ಷ ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದ್ದು, ೩.೪೯ ಲಕ್ಷ ಪೆಟ್ಟಿಗೆ ಬಿಯರ್ ಖರ್ಚಾಗಿದೆ. ಈ ವರ್ಷವೂ ವಿರಾಜಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ೩.೮೮ ಲಕ್ಷ ಪೆಟ್ಟಿಗೆ ಮದ್ಯ ಮಾರಾಟವಾಗಿದ್ದು, ಸೋಮವಾರಪೇಟೆ ತಾಲೂಕಿನಲ್ಲಿ ಬಿಯರ್ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ೧.೩೪ ಲಕ್ಷ ಪೆಟ್ಟಿಗೆಗಳಷ್ಟು ಮಾರಾಟ ಆಗಿದೆ. ಮಡಿಕೇರಿ ತಾಲೂಕಿನಲ್ಲಿ ೨.೨೩ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೩.೬೯ ಪೆಟ್ಟಿಗೆ ಮದ್ಯ ಮಾರಾಟವಾಗಿದ್ದರೆ, ಮಡಿಕೇರಿ ತಾಲೂಕಿನಲ್ಲಿ ೯೬ ಸಾವಿರ ಪೆಟ್ಟಿಗೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ೧.೨೦ ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದೆ.

೨೦೨೨-೨೩ರಲ್ಲಿ ಜಿಲ್ಲೆಯಲ್ಲಿ ಒಟ್ಟು ೧೦.೨೮ ಲಕ್ಷ ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದ್ದು, ೫.೧೭ ಲಕ್ಷ ಪೆಟ್ಟಿಗೆ ಬಿಯರ್ ಖರ್ಚಾಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ೨.೫೨ ಲಕ್ಷ ಪೆಟ್ಟಿಗೆ ಮದ್ಯ ಮಾರಾಟವಾಗಿದ್ದು, ಮಡಿಕೇರಿ ತಾಲೂಕಿನಲ್ಲಿ ಬಿಯರ್ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ೧.೩೭ ಲಕ್ಷ ಪೆಟ್ಟಿಗೆಗಳಷ್ಟು ಮಾರಾಟ ಆಗಿದೆ. ಮಡಿಕೇರಿ ತಾಲೂಕಿನಲ್ಲಿ ೨.೪೦, ಸೋಮವಾರಪೇಟೆ ತಾಲೂಕಿನಲ್ಲಿ ೧.೮೩, ವಿರಾಜಪೇಟೆ ತಾಲೂಕಿನಲ್ಲಿ ೧.೬೧ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧.೯೨ ಪೆಟ್ಟಿಗೆ ಮದ್ಯ ಮಾರಾಟ ಕಂಡಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೮೯ ಸಾವಿರ, ವಿರಾಜಪೇಟೆ ತಾಲೂಕಿನಲ್ಲಿ ೮೩ ಸಾವಿರ, ಪೊನ್ನಂಪೇಟೆ ತಾಲೂಕಿನಲ್ಲಿ ೯೦ ಸಾವಿರ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧.೧೮ ಸಾವಿರ ಪೆಟ್ಟಿಗೆ ಬಿಯರ್ ಮಾರಾಟವಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಮದ್ಯ ಮಾತ್ರವಲ್ಲದೆ ಬಿಯರ್ ಮಾರಾಟವೂ ಜಾಸ್ತಿ ಆಗಿದೆ. ಹೊಸ ತಾಲೂಕುಗಳಾದ ಪೊನ್ನಂಪೇಟೆ ಮತ್ತು ಕುಶಾಲನಗರ ತಾಲೂಕಿನ ಪ್ರತ್ಯೇಕ ಅಂಕಿ ಸಂಖ್ಯ್ಯೆಗಳು ೨೦೨೦-೨೧ ಮತ್ತು ೨೦೨೧-೨೨ರಲ್ಲಿ ಲಭ್ಯವಿಲ್ಲ. ಈ ಎರಡೂ ವರ್ಷಗಳಲ್ಲೂ ಇವು ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿಗೆ ಸೇರಿಕೊಂಡಿದ್ದವು. ೨೦೨೨-೨೩ರಲ್ಲಿ ಈ ಎರಡೂ ತಾಲೂಕುಗಳ ಪ್ರತ್ಯೇಕ ಅಂಕಿ ಸಂಖ್ಯೆಗಳು ಲಭ್ಯವಿದ್ದು, ಸೋಮವಾರಪೇಟೆ ತಾಲೂಕಿಗಿಂತ ಕುಶಾಲನಗರ ತಾಲೂಕಿನಲ್ಲಿ ಮತ್ತು ವಿರಾಜಪೇಟೆ ತಾಲೂಕಿಗಿಂತ ಪೊನ್ನಂಪೇಟೆ ತಾಲೂಕಿನಲ್ಲಿ ಮದ್ಯ ಹಾಗೂ ಬೀಯರ್ ಮಾರಾಟ ಹೆಚ್ಚು ಇರುವುದು ಗಮನಾರ್ಹವಾಗಿದೆ.

ನಕಲಿ ಮದ್ಯ ತಯಾರಿಕೆ ಮಾಡಿ ಅದನ್ನು ಮಾರಾಟ ಮಾಡುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದ್ದು, ಇದರ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಕಾಯ್ದೆ ಮತ್ತು ತತ್ಸಂಬಂಧ ನಿಯಮಗಳನ್ನು ಜಾರಿಗೊಳಿಸುವ ಕ್ರಮಗಳನ್ನು ಚುರುಕುಗೊಳಿಸಲಾಗಿದೆ. ಇಲಾಖೆಯ ಸಿಬ್ಬಂದಿ ಸದಾ ಕಾಲ ಜಾಗೃತರಾಗಿದ್ದು, ನಿರಂತರವಾಗಿ ದಾಳಿ ಕಾರ್ಯ ನಡೆಸಲಾಗುತ್ತಿದೆ. ಹಿಂದಿನ ಪ್ರಕರಣಗಳ ಪೂರ್ವಾಪರಾಧಿಗಳ ಚಲನ- ವಲನಗಳ ಬಗ್ಗೆ ಅಬಕಾರಿ ಗಸ್ತಿನ ವೇಳೆಯಲ್ಲಿ ನಿಗಾ ಇಡಲಾಗಿದೆ. ಹೊರ ರಾಜ್ಯಗಳಿಂದ ಅಕ್ರಮವಾಗಿ ಸಾಗಾಟವಾಗುವ ನಕಲಿ ಮದ್ಯವನ್ನು ತಡೆಗಟ್ಟಲು ನಿಯಮಿತವಾಗಿ ರಸ್ತೆಗಾವಲು ಮತ್ತು ರಸ್ತೆಗಸ್ತು ಕೈಗೊಂಡು ವಾಹನಗಳ ಹಾಗೂ ವ್ಯಕ್ತಿಗಳ ತಪಾಸಣೆಯನ್ನು ನಡೆಸಲಾಗುತ್ತಿದೆ.
ಆರ್.ಬಿ. ತಿಮ್ಮಾಪುರ, ಅಬಕಾರಿ ಸಚಿವ

ಕೊಡಗಿಗೆ ಪ್ರವಾಸಿಗರು ಹೆಚ್ಚಾದಂತೆ ಸಹಜವಾಗಿ ಮದ್ಯ ಮಾರಾಟವೂ ಜಾಸ್ತಿ ಆಗುತ್ತದೆ. ಪ್ರವಾಸಿಗರು ಬರುವುದೇ ರಿಲ್ಯಾಕ್ಷೇಷನ್ ಮತ್ತು ಎಂಜಾಯ್ ಮಾಡಲು. ಇದರಿಂದಾಗಿ ವ್ಯವಹಾರ ಹೆಚ್ಚಾಗುತ್ತದೆ. ಈ ಮೂಲಕ ಸರ್ಕಾರದ ಆದಾಯದಲ್ಲೂ ಏರಿಕೆ ಕಾಣಬಹುದು. ಈಗ ಮದ್ಯದ ದರ ಹೆಚ್ಚು ಮಾಡಿರುವುದರಿಂದಲೂ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತಿದೆ.
ಬಿ.ಆರ್. ನಾಗೇಂದ್ರ ಪ್ರಸಾದ್, ಅಧ್ಯಕ್ಷ, ಹೊಟೇಲ್, ರೆಸಾರ್ಟ್ ಹಾಗೂ ರೆಸ್ಟೋರೆಂಟ್ ಅಸೋಸಿಯೇಷನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net