

ಕಲಘಟಗಿ: ಇಂದು ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾವನ್ನು ಸದುಪಯೋಗ ಪಡಿಸಿಕೊಂಡು ತಾವಿರುವ ಸ್ಥಳದಲ್ಲಿಯೇ ಅವಶ್ಯಕ ಮಾಹಿತಿ ಪಡೆದು ಕೊಳ್ಳಬಹುದು ಎಂದು ಧಾರವಾಡ ಉನ್ನತ ಶಿಕ್ಷಣ ಅಕಾಡೆಮಿಯ ಆಯ್ಕೆ ಶ್ರೇಣಿ ಗ್ರಂಥಪಾಲಕ ಡಾ. ಎಂ.ಎನ್. ಮೂಲಿಮನಿ ಹೇಳಿದರು.
ಪಟ್ಟಣದ ಗುಡ್ ನ್ಯೂಸ್ ವೆಲ್ತ್ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಕೇಂದ್ರದ ವತಿಯಿಂದ ಯುಜಿಸಿ ಮಾಹಿತಿ ಹಾಗೂ ಗಂಥಾಲಯ ನೆಟ್ವರ್ಕ್ ಅಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಆಧುನಿಕ ತಂತ್ರಜ್ಞಾನದ ನಾಗಾಲೋಟದ ಬೆಳವಣಿಗೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎಲ್ಲಿಯಾದರೂ ಕುಳಿತು ತಮಗೆ ಅವಶ್ಯವಿರುವ ವಿಷಯದ ಕುರಿತು ಓದಲು ಇ-ನಿಯತಕಾಲಿಕೆ ಮತ್ತು ಇ-ಪುಸ್ತಕಗಳು ಅನುಕೂಲಕರವಾಗಲಿದೆ. ಇಂದು ಆಧುನಿಕ ತಂತ್ರಜ್ಞಾನದ ನೆಟ್ವರ್ಕ್ನಲ್ಲಿ 1 ಲಕ್ಷ 20 ಸಾವಿರ ಇ-ಪುಸ್ತಕಗಳು ಹಾಗೂ 25 ಸಾವಿರ ಇ-ನಿಯತಕಾಲಿಕೆಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಯಾವುದೇ ಸಮಯದಲ್ಲಿ ವಿದ್ಯಾರ್ಥಿಗಳು ಮೊಬೈಲ್, ಕಂಪ್ಯೂಟರ್ ಮುಂತಾದವುಗಳಿಂದ ಸದುಪಯೋಗ ಪಡೆದುಕೊಂಡು, ಜ್ಞಾನ ಹೆಚ್ಚಿಸಿಕೊಳ್ಳಬಹುದು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಜಿ. ಬಿರಾದಾರ, ಗ್ರಂಥಪಾಲಕ ಡಾ.ಮಹೇಶ ಹೊರಕೇರಿ, ಪ್ರೊ. ಎಂ. ಎಸ್. ಮುರಗೋಡಮಠ, ಪ್ರೊ. ಎಸ್.ಆರ್. ಎಮ್ಮಿ, ಪ್ರೊ. ವಿಜಯ ಬೆಟಗಾರ, ಮಾಹಾದೇವಪ್ಪ ಉಳ್ಳಾಗಡ್ಡಿ, ಎಸ್. ಎನ್. ಕಟ್ಟಿಮನಿ, ಮಹಿಮಾ ಪೂಜಾರ, ಮಾಂತೇಶ ನಿಂಬಣ್ಣವರ, ಕೆ.ಎ. ಶೇಖ, ಅಕ್ಷತಾ ಕುಬ್ಯಾಳ, ಎನ್. ಆರ್. ನೆನಕ್ಕಿ, ಆರ್. ಟಿ. ಗೊಲ್ಲಳ್ಳಿ, ಎಸ್. ಬಿ. ಹೆಬ್ಬಳ್ಳಿಮಠ, ಬೋಧಕ- ಬೋಧಕೇತರ ಸಿಬ್ಬಂದಿ ಇದ್ದರು.