

ಮೈಸೂರು: ಹಾಸನ ಜಿಲ್ಲಾ ಬಳಗ ಸಾಮಾಜಿಕವಾಗಿ ಒಂದು ಸಮಾಜವನ್ನು ಬೆಸೆಯುವಂತಹ ಭಾವೈಕ್ಯತೆಯ ಉದ್ದೇಶವನ್ನು ಹೊಂದಿದೆ ಎಂದು ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್ ತಿಳಿಸಿದರು.
ಹಾಸನ ಜಿಲ್ಲಾ ಬಳಗದಿಂದ ನಗರದ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸರ್ವಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಶಿಕ್ಷಣ ಜೀವನವನ್ನು ಕಲಿಸುವ ಪಾಠಶಾಲೆಯಾಗಿತ್ತು. ಸಾಮೂಹಿಕವಾಗಿತ್ತು, ಸಾರ್ವತ್ರಿಕತೆ ಇತ್ತು. ಆದರೆ ಇಂದಿನ ಶಾಲೆಗಳು ಶಾಂಗಿಕ ಶಾಲೆಗಳಾಗಿವೆ. ಮಕ್ಕಳು ಮಕ್ಕಳಲ್ಲಿಯೇ ತಾರತಮ್ಯ ಮೂಡಿಸುತ್ತಿದ್ದೇವೆ. ನಮ್ಮ ಮಕ್ಕಳಲ್ಲಿ ಸಮಭಾವ ಬೆಳೆಯುತ್ತಿಲ್ಲ. ಬಾಲಾಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂಕಿ-ಅಂಶದ ಪ್ರಕಾರ 2020-21ನೇ ಸಾಲಿನಲ್ಲಿ 31,170 ಮಕ್ಕಳು ಬಾಲಾಪರಾಧಿಗಳಾಗಿದ್ದಾರೆ. ಇದನ್ನು ಪಾಲಕರು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಚಾಮರಾಜ ಶಾಸಕ ಕೆ.ಹರೀಶ್‌ಗೌಡ, ಸಂಘದ ಅಧ್ಯಕ್ಷ ಬಾಲಾಜಿ ಶೇಖರ್, ಗೌರವ ಅಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿಗಳಾದ ಬಿ.ಜಿ.ರಂಗೇಗೌಡ, ರೇವಣ್ಣ, ಮಾಜಿ ಮೇಯರ್ ಮೋದಾಮಣಿ, ಮುಖಂಡರಾದ ರಮೇಶ್ ರಾಮಚಂದ್ರ, ಪುಟ್ಟಸ್ವಾಮಿ ಗೌಡ, ಅಣ್ಣೇಗೌಡ, ತುಕುರಾಂರಾವ್, ಶಶಿಕುಮಾರ್ ಇತರರು ಇದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ, ಸಾಧಕರಿಗೆ ಅಭಿನಂದನೆ, ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.