ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹ ಹೆಚ್ಚಳ

Increase in inter-caste marriages in the district
Published on

ಮಡಿಕೇರಿ:

ಜಾತಿರಹಿತ ಸಮಾಜ ನಿರ್ಮಿಸುವಲ್ಲಿ ಅಂತರ್‌ಜಾತಿ ವಿವಾಹಗಳು ಪ್ರಮುಖ ಪಾತ್ರ ವಹಿಸುತ್ತವೆ. ಸರ್ಕಾರ ಕೂಡ ಅಂತರ್‌ಜಾತೀಯ ವಿವಾಹಕ್ಕೆ ಪ್ರೋತ್ಸಾಹ ಕೊಡುತ್ತಾ ಬಂದಿದೆ. ಈ ರೀತಿಯ ಮದುವೆಗಳನ್ನು ಉತ್ತೇಜಿಸುವ ಸಲುವಾಗಿ ಸರ್ಕಾರದಿಂದ ಪ್ರೋತ್ಸಾಹಧನವನ್ನೂ ಕೊಡಲಾಗುತ್ತಿದೆ. ಹೆಚ್ಚು ಸಾಕ್ಷರತಾ ಪ್ರಮಾಣ ಹೊಂದಿರುವ ಕೊಡಗಿನಲ್ಲೂ ಇತ್ತೀಚಿನ ವರ್ಷಗಳಲ್ಲಿ ಜಾತಿಯ ಬೇಲಿಯ ಆಚೆ ನಿಂತು ವಿವಾಹ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರದ ಪ್ರೋತ್ಸಾಹಧನಕ್ಕಾಗಿ ಕಳೆದ ೫ ವರ್ಷಗಳಲ್ಲಿ ಒಟ್ಟು ೩೧೩ ಅರ್ಜಿಗಳು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಕೆ ಆಗಿದೆ.

ಶ್ರೇಣೀಕೃತ ಸಮಾಜ ವ್ಯವಸ್ಥೆಯ ಭಾರತದಲ್ಲಿ ಪರಜಾತಿಯ ವಿವಾಹದ ಬಗ್ಗೆ ಬಹಳ ಹಿಂದಿನಿಂದಲೂ ನಕರಾತ್ಮಕ ಮನೋಭಾವವೇ ಮನೆ ಮಾಡಿಕೊಂಡಿತ್ತು. ಜಗತ್ತು ಆಧುನಿಕತೆಯತ್ತ ತೆರೆದುಕೊಂಡು ಶೈಕ್ಷಣಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಕ್ರಾಂತಿ ಉಂಟಾಗುತ್ತಿದ್ದಂತೆಯೇ ಅಂತರ್‌ಜಾತಿ ಮದುವೆ ವರ್ಜ್ಯ ಅಲ್ಲ ಎನ್ನುವ ಸ್ವೀಕಾರಾರ್ಹ ಗುಣ ಕಾಣಿಸಿಕೊಳ್ಳುತ್ತಿರುವುದು ಇತ್ತೀಚಿನ ದಶಕಗಳಲ್ಲಿ ಉಂಟಾಗಿರುವ ಬೆಳವಣಿಗೆ ಆಗಿದೆ. ಕಾಲ ಕಾಲಕ್ಕೆ ಸರ್ಕಾರದಿಂದ ನಡೆಯುವ ಜಾಗೃತಿ ಕಾರ್ಯಕ್ರಮಗಳೂ ಸಾಕಷ್ಟು ಪರಿಣಾಮ ಬೀರುತ್ತಿದ್ದು, ಯುವ ಜೋಡಿಗಳು ಜಾತಿಯ ಎಲ್ಲೆ ಮೀರಿ ವಿವಾಹ ಬಂಧನಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಈ ವಿಷಯದಲ್ಲಿ ಪೋಷಕರು ಕೂಡ ಮೆದುವಾಗುತ್ತಿರುವುದು ಅಂತರ್‌ಜಾತೀಯ ವಿವಾಹಗಳ ಸಂಖ್ಯೆ ವೃದ್ಧಿಸುತ್ತಿರುವುದಕ್ಕೆ ಕಾರಣವಾಗಿದೆ.

ಇಬ್ಬರು ಪ್ರಬುದ್ಧ ವ್ಯಕ್ತಿಗಳು ಮದುವೆಯಾಗಲು ತಮ್ಮ ಸಂಗಾತಿ ಆಯ್ಕೆ ಮಾಡಿಕೊಂಡ ನಂತರ, ಕುಟುಂಬ ಅಥವಾ ಸಮುದಾಯದ ಒಪ್ಪಂದದ ಅಗತ್ಯವಿಲ್ಲ. ಅವರ ಅನುಮೋದನೆಗೆ ಆದ್ಯತೆ ನೀಡಬೇಕು ಎನ್ನುತ್ತದೆ ಕಾನೂನು. ಇದಕ್ಕೆ ಪೂರಕವಾಗಿ ಇತ್ತೀಚೆಗೆ ವಿದ್ಯಾವಂತ ಯುವ ಜನಾಂಗ ತಮ್ಮ ಜಾತಿ ಮೀರಿ ಮದುವೆ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ. ಇಂಥ ಬೆಳವಣಿಗೆಗಳಿಂದ ದೇಶದಲ್ಲಿ ಜಾತಿ ಮತ್ತು ಕೋಮು ಸಂಘರ್ಷ ನಿವಾರಿಸಲು ಸಹಾಯ ಆಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಅಂತರ್‌ಜಾತೀಯ ವಿವಾಹದ ಬಗ್ಗೆ ಸರ್ಕಾರ ಕೇವಲ ಜಾಗೃತಿ ಕಾರ್ಯಕ್ರಮಗಳನ್ನಷ್ಟೇ ನಡೆಸುತ್ತಿಲ್ಲ. ಉತ್ತಮ ಮೊತ್ತದ ಪ್ರೋತ್ಸಾಹ ಧನವನ್ನೂ ನೀಡುತ್ತಿದೆ. ಅಗತ್ಯ ಬಿದ್ದರೆ ಪೊಲೀಸ್ ರಕ್ಷಣೆ, ಸಾಮಾಜಿಕ ಪರಿಣಾಮಗಳ ವಿರುದ್ಧ ಹೋರಾಡುವ ಸ್ಥೈರ್ಯ ನೀಡುವ ಕೆಲಸವನ್ನೂ ಮಾಡಲಾಗುತ್ತಿದೆ. ಸಮಸಮಾಜದ ನಿರ್ಮಾಣಕ್ಕೆ ಅಂತರ್‌ಜಾತಿ ವಿವಾಹಗಳು ಪರಿಣಾಮಕಾರಿ ಮಾರ್ಗ ಎನ್ನುವ ಪ್ರಗತಿಪರರ ಚಿಂತನೆಗೆ ಪೂರಕವಾಗಿ ಸರ್ಕಾರ ನೀಡುತ್ತಿರುವ ಉತ್ತೇಜನದಿಂದ ಇತ್ತೀಚಿನ ಕೆಲ ವರ್ಷಗಳಿಂದ ಅಂತರ್‌ಜಾತಿ ವಿವಾಹಗಳ ಸಂಖ್ಯೆ ಏರುಗತಿಯಲ್ಲಿದೆ.

ಅಂತರ್‌ಜಾತೀಯ ವಿವಾಹಗಳಿಗೆ ಸಮಾಜ ಕಲ್ಯಾಣ ಇಲಾಖೆ ಮೂಲಕ ಸರ್ಕಾರ ಕೊಡುತ್ತಿರುವ ಪ್ರೋತ್ಸಾಹಧನಕ್ಕೆ ಕಳೆದ ೫ ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು ೨೦,೩೬೫ ಅರ್ಜಿಗಳು ಸಲ್ಲಿಕೆ ಆಗಿವೆ. ಈ ಪೈಕಿ ಕೊಡಗಿನಲ್ಲಿ ೩೧೩ ಅರ್ಜಿಗಳು ಬಂದಿವೆ. ೨೦೧೮-೧೯ರಲ್ಲಿ ೫೦, ೨೦೧೯-೨೦ರಲ್ಲಿ ೫೧, ೨೦೨೦-೨೧ರಲ್ಲಿ ೭೨, ೨೦೨೧-೨೨ರಲ್ಲಿ ೬೬, ೨೦೨೨-೨೩ರಲ್ಲಿ ೭೪ ಅರ್ಜಿಗಳು ಅಂತರ್‌ಜಾತೀಯ ವಿವಾಹ ಪ್ರೋತ್ಸಾಹಧನಕ್ಕಾಗಿ ಅಲ್ಲಿಕೆ ಆಗಿದೆ. ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ ಜೋಡಿಗಳ ಪೈಕಿ ಈ ವರ್ಷ ೩೫ ದಂಪತಿಗೆ ೧.೧೮ ಕೋಟಿ ರೂ. ನೀಡಲಾಗಿದೆ. ಇನ್ನೂ ೨೬ ದಂಪತಿಗೆ ೭೩ ಲಕ್ಷ ರೂ. ಕೊಡಲು ಬಾಕಿ ಉಳಿದಿದೆ. ಈ ಪ್ರೋತ್ಸಾಹಧನ ಪಡೆದುಕೊಳ್ಳಲು ಸರ್ಕಾರ ಹಲವು ನಿಬಂಧನೆಗಳನ್ನು ವಿಧಿಸಿದ್ದು, ಇವುಗಳು ತೃಪ್ತಿಕರವಾಗಿ ಕಂಡುಬಂದರೆ ಸರ್ಕಾರ ಪ್ರೋತ್ಸಾಹಧನ ವಿತರಿಸುತ್ತದೆ.

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಗಂಡು ಇತರೆ ಜಾತಿ ಹೆಣ್ಣನ್ನು ಮದುವೆಯಾದರೆ ೨.೫ ಲಕ್ಷ ರೂ., ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಹೆಣ್ಣು ಇತರೆ ಜಾತಿ ಗಂಡು ಮದುವೆಯಾದಲ್ಲಿ ೩ ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಒಳಪಂಗಡಗಳಲ್ಲಿ ಅಂತರ್‌ಜಾತಿ ವಿವಾಹವಾದಲ್ಲಿ ೨ ಲಕ್ಷ ರೂ. ಪ್ರೋತ್ಸಾಹ ಧನ ಸಿಗುತ್ತದೆ. ಅರ್ಜಿ ಸಲ್ಲಿಸುವವರು ಮದುವೆಯಾದ ವರ್ಷದ ಒಳಗೆ ನೋಂದಣಿ ಮಾಡಿಸಿಕೊಳ್ಳಬೇಕು. ಒಂದೂವರೆ ವರ್ಷದ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಪ್ರೋತ್ಸಾಹ ಧನದ ಪೈಕಿ ಅರ್ಧದಷ್ಟು ಮೊತ್ತವನ್ನು ದಂಪತಿ ಹೆಸರಿನಲ್ಲಿ ಠೇವಣಿ ಇಡಲಾಗುತ್ತದೆ. ಉಳಿದ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಪ್ರೋತ್ಸಾಹ ಧನ ಪಡೆಯಲು ಫಲಾನುಭವಿ ರಾಜ್ಯದ ನಿವಾಸಿಯಾಗಿರಬೇಕು. ಅವರ ಆದಾಯ ಮಿತಿ ೫ ಲಕ್ಷ ರೂ.ಮೀರಬಾರದು.

ಪ್ರೋತ್ಸಾಹಧನಕ್ಕಾಗಿ ಅರ್ಜಿ ಹಾಕುವ ಜೋಡಿ ಹಿಂದೂ ಧರ್ಮಕ್ಕೆ ಸೇರಿದ್ದು ಆಧಾರ್ ಸಂಖ್ಯೆ, ಜಾತಿ ಪ್ರಮಾಣ ಪತ್ರ ಸಂಖ್ಯೆ, ಆದಾಯ ಪ್ರಮಾಣ ಪತ್ರ ಸಂಖ್ಯೆ, ಮದುವೆ ಪುರಾವೆ, ಮದುವೆಯ ಫೋಟೋ ಹಾಗೂ ಮೊಬೈಲ್ ಸಂಖ್ಯೆಯನ್ನು ಅರ್ಜಿಯ ಜತೆಗೆ ಕೊಡಬೇಕು. ಈ ವಿವರಗಳನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಪ್ರೋತ್ಸಾಹಧನಕ್ಕೆ ಅರ್ಹರಾಗಿದ್ದಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಾರೆ.

ಅಂತರ್ಜಾತಿ ವಿವಾಹ ಯೋಜನೆಯಡಿ ವಿವಾಹವಾಗುವ ದಂಪತಿಗಳಿಗೆ ಪ್ರೋತ್ಸಾಹಧನ ನೀಡುವ ಬಗ್ಗೆ ಗ್ರಾಮ, ಹೋಬಳಿ, ತಾಲೂಕು ಅಥವಾ ಜಿಲ್ಲಾ ಮಟ್ಟದಲ್ಲಿ ನಡೆಯುವ ಅರಿವು ಮೂಡಿಸುವ

ಕಾರ್ಯಕ್ರಮಗಳಲ್ಲಿ ವ್ಯಾಪಕ ಪ್ರಚಾರ ಮತ್ತು ಜಾಗೃತಿ ಮೂಡಿಸಲಾಗುತ್ತದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ವಲಯ ಮತ್ತು ಕೇಂದ್ರ ವಲಯದಿಂದ ಅನುದಾನ ಒದಗಿಸುತ್ತಿದ್ದು, ಪ್ರೋತ್ಸಾಹಧನಕ್ಕಾಗಿ ಸ್ವೀಕೃತವಾಗಿರುವ ಅರ್ಜಿಗಳಲ್ಲಿ ಅರ್ಹವಿರುವ ಎಲ್ಲರಿಗೂ ಪ್ರೋತ್ಸಾಹಧನ ನೀಡಲು ಅನುದಾನ ಕೊರತೆಯಿದೆ. ಆರ್ಥಿಕ ಇಲಾಖೆಯಿಂದ ಪೂರಕ ಆಯವ್ಯಯ-೧ರಲ್ಲಿ ಹೆಚ್ಚುವರಿ ಅನುದಾನ ಹಂಚಿಕೆ ಮಾಡಲು ಕ್ರಮವಹಿಸಲಾಗುತ್ತಿದೆ.
ಡಾ. ಹೆಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ

ಅಂತರ್‌ಜಾತೀಯ ವಿವಾಹ ಮತ್ತು ಇದಕ್ಕೆ ಸರ್ಕಾರದಿಂದ ಸಿಗುವ ಪ್ರೋತ್ಸಾಹಧನದ ಬಗ್ಗೆ ನಮ್ಮ ಇಲಾಖೆ ವತಿಯಿಂದ ಸಾಕಷ್ಟು ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕೊಡಗಿನಲ್ಲಿ ಅಂತರ್‌ಜಾತೀಯ ವಿವಾಹಗಳು ಹೆಚ್ಚಾಗುತ್ತಿದ್ದು ಬಹಳಷ್ಟು ಮಂದಿ ಸರ್ಕಾರದ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರೋತ್ಸಾಹಧನಕ್ಕಾಗಿ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ ಜೋಡಿಗಳ ಪೈಕಿ ಈ ವರ್ಷ ೩೫ ದಂಪತಿಗೆ ೧.೧೮ ಕೋಟಿ ರೂ. ನೀಡಲಾಗಿದೆ. ಇನ್ನೂ ೨೬ ದಂಪತಿಗೆ ೭೩ ಲಕ್ಷ ರೂ. ಕೊಡಲು ಬಾಕಿ ಉಳಿದಿದೆ.
ಶೇಖರ್, ಉಪನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net