

ಶೃಂಗೇರಿ: ನಿಸ್ವಾರ್ಥದಿಂದ ಉತ್ತಮವಾಗಿ ಕೆಲಸ ಮಾಡಿದಾಗ ಆತನ ಅಂತರಂಗ ಸಾಮರ್ಥ್ಯ ಹೆಚ್ಚಾಗುತ್ತದೆ. ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರು ಸರ್ವರಿಗೂ ಜೀವನದ ಮೌಲ್ಯಗಳ ಅರಿವು ನೀಡಿದ್ದು, ಅಂಥ ಅಮೂಲ್ಯ ಚಿಂತನೆಗಳನ್ನು ನಾವು ದಿನನಿತ್ಯದ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಹೇಳಿದರು.
ಶೃಂಗೇರಿ ಆದಿಚುಂಚನಗಿರಿ ಶಾಖಾಮಠದಲ್ಲಿ ಶನಿವಾರ ಎಚ್.ಕೆ.ಅನಸೂಯಾ ಕಲ್ಕುಳಿ ಸಂಸ್ಮರಣೆ ಅಂಗವಾಗಿ ಹಮ್ಮಿಕೊಂಡ ಕುವೆಂಪು ದೃಷ್ಟಿಯಲ್ಲಿ ಕೃಷಿಜನ್ಯ ಮಲೆನಾಡು ಎಂಬ ವಿಷಯದ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶಿಕ್ಷಣ ಕ್ಷೇತ್ರಕ್ಕೆ ಎಚ್.ಕೆ.ಅನಸೂಯಾ ಕಲ್ಕುಳಿ ಅವರ ಕುಟುಂಬ ನೀಡಿದ ಕೊಡುಗೆ ಅನನ್ಯ. ಶಿಕ್ಷಕರು ನೈತಿಕತೆ, ಮಾನವೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅರಿವು ಶಿಕ್ಷಕರಲ್ಲಿ ಇರಬೇಕು. ದೇಶದ ಉನ್ನತಿಗಾಗಿ ಯುವಪೀಳಿಗೆ ಕೊಡುಗೆ ನೀಡಬೇಕು. ವಿಜ್ಞಾನಿಗಳು ಕೂಡಾ ಆಧ್ಯಾತ್ಮಿಕ ಚಿಂತನೆಗಳತ್ತ ಸಾಗುತ್ತಿದ್ದಾರೆ. ಶ್ರೀ ಶಂಕರಾಚಾರ್ಯರು ಧರ್ಮದ ಉದ್ಧಾರಕ್ಕಾಗಿ ಅವತರಿಸಿ, ಲೋಕಕಲ್ಯಾಣಕ್ಕಾಗಿ ದುಡಿದ ಮಹನೀಯರು ಎಂದರು.
ಉಪನ್ಯಾಸಕ ಎಚ್.ಎ.ಗಣಪತಿ ಮಾತನಾಡಿ, ಮಲೆನಾಡಿನ ಸೌಂದರ್ಯವನ್ನು ಕೃತಿಗಳಲ್ಲಿ ಬಣ್ಣಿಸಿದ ಕುವೆಂಪು ಅವರು ಕೃಷಿಜನ್ಯ ಮಲೆನಾಡನ್ನು ದರ್ಶಿಸಿದವರು. ಮಲೆನಾಡಿನ ತಂಗಾಳಿ, ಸತತವಾಗಿ ಬೀಳುತ್ತಿದ್ದ ಮಳೆ, ಕೋಗಿಲೆಗಳ ಇಂಚರ ಮತ್ತು ಮಲೆನಾಡಿನ ಕೃಷಿಗಳ ಹಿರಿಮೆಯನ್ನು ಕೃತಿಗಳ ಮೂಲಕ ಜಗತ್ತಿಗೆ ಪರಿಚಯಿಸಿದರು ಎಂದರು.
ಕೃಷಿಕ ಮಲ್ಲಪ್ಪ ಹೆಗ್ಡೆ, ಬಿಜಿಎಸ್ ಕಾಲೇಜಿನ ಪ್ರಾಚಾರ್ಯ ಕೆ.ಸಿ.ನಾಗೇಶ್, ಸಾಹಿತಿ ಕಲ್ಕುಳಿ ವಿಠಲ್ ಹೆಗ್ಡೆ, ಕೃಷಿಕರಾದ ಗೋಪಾಲ್ ಹೆಗ್ಡೆ ಇದ್ದರು.