ಆಲಮಟ್ಟಿ ಡ್ಯಾಮ್‌ಗೆ ಒಳಹರಿವು ಹೆಚ್ಚಳ

Increase in inflow to Alamati Dam
ಆಲಮಟ್ಟಿ ಜಲಾಶಯದ ಗೇಟ್‌ಗಳ ಮೂಲಕ ನದಿ ಪಾತ್ರಕ್ಕೆ ನೀರು ಹರಿಸಲಾಗುತ್ತಿರುವ ರಮಣೀಯ ದಶ್ಯ.
Published on

ಆಲಮಟ್ಟಿ: ಮುಂಗಾರು ಮಳೆಯ ಅಬ್ಬರ ಮುಂದುವರಿದಿದೆ. ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿಯೂ ರಣ ಭೀಕರ ಮಳೆಯಾಗುತ್ತಿದೆ. ಇಲ್ಲಿ ವರುಣದೇವ ಅವಾಂತರವನ್ನೇ ಸಷ್ಟಿ ಮಾಡಿದ್ದಾನೆ. ಆದರೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಳೆ ಮಾಯವಾಗಿದೆ. ಮಳೆಯಿಲ್ಲದಿದ್ದರೂ ಇಲ್ಲಿನ ಲಾಲ್ ಬಹಾದ್ದೂರ ಶಾಸೀ ಸಾಗರಕ್ಕೆ ಉತ್ತಮ ಒಳ ಹರಿವು ಉಂಟಾಗಿದೆ. ಒಳ ಹರಿವಿನಿನ ಹೆಚ್ಚಳದಿಂದ ಜಲಾಶಯಕ್ಕೆ ಹೊಸ ಕಳೆಯ ಜೊತೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮಹಾರಾಷ್ಟ್ರದಲ್ಲಿ ಕಷ್ಣಾ ನದಿ ಉಗಮ ಸ್ಥಾನ ಮಹಾಬಳೇಶ್ವರ, ಸಾತಾರ, ಚಿಪ್ಲೂನ್, ರತ್ನಾಗಿರಿ ಹಾಗೂ ಕಷ್ಣಾನದಿ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಪರಿಣಾಮ ಆಲಮಟ್ಟಿ ಡ್ಯಾಂಗೆ ಒಳ ಹರಿವು ಹೆಚ್ಚಾಗಿದೆ. ಅಲ್ಲದೇ ವಿಜಯಪುರ ಜಿಲ್ಲೆಯಲ್ಲಿ ವಾಡಿಕೆಯಂತೆ ಜೂನ್‌ನಲ್ಲಿ 85.4 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 246.4 ಮಿಲಿ ಮೀಟರ್ ಮಳೆಯಾಗಿ ದಾಖಲೆಯಾಗಿತ್ತು. ಇಷ್ಟು ಪ್ರಮಾಣದ ಮಳೆಯಾಗಿದ್ದರೂ ಸಹ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಉಂಟಾಗಿರಲಿಲ್ಲ. ಜಿಲ್ಲೆಯಲ್ಲಿ ಆದಂತ ಮಳೆ ನೀರು ನೆರೆಯ ಯಾದಗಿರಿ ಜಿಲ್ಲೆಯ ಬಸವ ಸಾಗರ ಜಲಾಶಯಕ್ಕೆ ಒಳ ಹರಿವಿನ ರೂಪದಲ್ಲಿ ಹರಿದು ಹೋಗುತ್ತದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾದರೆ ಆಲಮಟ್ಟಿ ಡ್ಯಾಂ ಭರ್ತಿಯಾಗುತ್ತದೆ. ಇದರಿಂದ ಕುಡಿಯುವ ನೀರಿಗೆ, ಕೆರೆಗಳನ್ನು ತುಂಬಿಸುವ ಯೋಜನೆಗೆ ಹಾಗೂ ಏತ ನೀರಾವರಿ ಯೋಜನೆಗಳಿಗೆ ನೀರು ಸಿಗುತ್ತದೆ. ಹಾಗಾಗಿ ಮಹಾರಾಷ್ಟ್ರದಲ್ಲಿ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ರೈತರು.

261 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ

ಆಲಮಟ್ಟಿ ಜಲಾಶಯದ ಬಲಭಾಗದಲ್ಲಿರುವ ಆಲಮಟ್ಟಿ ವಿದ್ಯುದಾಗಾರದ ಮೂಲಕ ಒಟ್ಟು 40 ಸಾವಿರ ಕ್ಯೂಸೆಕ್ ನೀರನ್ನು ಘಟಕದಿಂದ ನದಿ ಪಾತ್ರಕ್ಕೆ ಹರಿಸುವ ಮೂಲಕ ಒಟ್ಟು 261 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ವಿದ್ಯುದಾಗಾರ 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಒಂದು ಘಟಕ ಹಾಗೂ 55 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ 5 ಘಟಕ ಸೇರಿ ಒಟ್ಟು 6 ಘಟಕಗಳಿಂದ ಒಟ್ಟು 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ.

ಮಹಾರಾಷ್ಟ್ರದಲ್ಲಿ ಬಾರಿ ಮಳೆ

ಮಹಾರಾಷ್ಟ್ರದ ಕಷ್ಣಾ ನದಿಯ ಉಗಮ ಸ್ಥಾನವಾದ ಮಹಾಬಲೇಶ್ವರದಲ್ಲಿ ಗುರುವಾರ 131 ಎಂ.ಎಂ. ಮಳೆ, ಕೊಯ್ನದಲ್ಲಿ 114 ಎಂ.ಎಂ, ನೌಜಾದಲ್ಲಿ 166 ಎಂ.ಎಂ, ವಾರಾಣಾದಲ್ಲಿ 55 ಎಂ.ಎಂ, ಉರ್ಮೋದಿಯಲ್ಲಿ 20 ಎಂ.ಎಂ, ರಾಧಾನಗರಿಯಲ್ಲಿ 163 ಎಂ.ಎಂ, ದೂಧಗಂಗಾದಲ್ಲಿ 73 ಎಂ.ಎಂ, ತರಾಲಿಯಲ್ಲಿ 46 ಎಂ.ಎಂ, ಕನ್ಹೇರನಲ್ಲಿ 13 ಎಂ.ಎಂ. ಮಳೆಯಾಗಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 46,000 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ ಎಂದು ತಿಳಿದುಬಂದಿದೆ.

97.416 ಟಿಎಂಸಿ ನೀರು ಸಂಗ್ರಹ

519.60 ಮೀ., ಎತ್ತರದ ಜಲಾಶಯದಲ್ಲಿ ಶುಕ್ರವಾರ 517.97 ಮೀಟರ್‌ವರೆಗೆ ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 61,138 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 65,480 ಕ್ಯೂಸೆಕ್ ಹೊರ ಹರಿವು ಇದೆ. ಕಳೆದ ವರ್ಷ ಇದೆ ದಿನಕ್ಕೆ 509.76 ಮೀ, 21,672 ಕ್ಯೂಸೆಕ್ ಒಳ ಹರಿವು, ಹೊರ ಹರಿವು 561 ಕ್ಯೂಸೆಕ್ ಇತ್ತು. 123.081 ಟಿ.ಎಂ.ಸಿ ಸಾಮರ್ಥ್ಯದ ಜಲಾಶಯದಲ್ಲಿ 97.416 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ 28.755 ಟಿಎಂಸಿ ಸಂಗ್ರಹವಿತ್ತು.

ಕಳೆದ ವರ್ಷಕ್ಕಿಂತ ಜಲಾಶಯಕ್ಕೆ ಮುಂಚಿತವಾಗಿ ಭರ್ತಿಯಾಗುತ್ತಾ ಸಾಗಿದೆ. ರೈತರ ಜಮೀನಿಗೆ ಯಾವುದೇ ಕಾರಣ ಹೇಳಿ ನೀರನ್ನು ಸ್ಥಗಿತಗೊಳಿಸದೆ ನೀರು ಹರಿಸಬೇಕು.
ಅರವಿಂದ ಕುಲಕರ್ಣಿ, ಅಖಂಡ ಕರ್ನಾಟಕ ರೈತ ಸಂಘ, ಜಿಲ್ಲಾ ಕಾರ್ಯದರ್ಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net