ಐಸಿಯು ಸಂಬಂಧಿತ ಸಂಶೋಧನೆಗಳು ಹೆಚ್ಚಳ

mysore
Published on

ಮೈಸೂರು: ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ(ಐಸಿಯು) ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಸಮಕುಲಾಧಿಪತಿ ಡಾ.ಬಿ.ಸುರೇಶ್ ಹೇಳಿದರು.


ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ‘ತೀವ್ರ ನಿಗಾ ಆರೈಕೆ ಕುರಿತು ಮುಂದುವರಿದ ಸಂಶೋಧನೆ ಮತ್ತು ಶಿಕ್ಷಣ’ ಕಾರ್ಯಾಗಾರದಲ್ಲಿ ಮಾತನಾಡಿದರು.


ಐಸಿಯು ಸೌಲಭ್ಯದಿಂದ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಬಹುದು. ಆದ್ದರಿಂದ ಐಸಿಯು ಪ್ರಮುಖ ಆರೋಗ್ಯ ಘಟಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಜತೆಗೆ, ಆಧುನಿಕ ತಂತ್ರಜ್ಞಾನವೂ ದೊರೆಯುತ್ತಿದೆ. ಇದರಿಂದ ಗುಣಮಟ್ಟದ ಚಿಕಿತ್ಸೆ ನೀಡಲು ಅನುಕೂಲವಾಗಿದೆ ಎಂದು ಹೇಳಿದರು.


ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಿಂದ ಆಗಮಿಸಿದ್ದ ಸುಮಾರು 20 ನುರಿತ ತಜ್ಞ ವೈದ್ಯರು, ಪ್ರಸ್ತುತ ತೀವ್ರ ನಿಗಾ ಘಟಕ ಕ್ಷೇತ್ರದಲ್ಲಿ ಆಗಿರುವ ಆಧುನಿಕ ಚಿಕಿತ್ಸೆಗಳ ಬೆಳವಣಿಗೆಗಳ ಬಗ್ಗೆ ವಿಷಯ ವಿನಿಮಯ ಮಾಡಿಕೊಂಡರು.


ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವನಗೌಡಪ್ಪ, ಜೆಎಸ್‌ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು, ಉಪನಿರ್ದೇಶಕ ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ, ಐಸಿಯು ಘಟಕದ ಮುಖ್ಯಸ್ಥ ಡಾ.ಅಕ್ಷಯ್, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಸತೀಶ್‌ಚಂದ್ರ ಪಾಲ್ಗೊಂಡಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಅಂದಾಜು 230 ವೈದ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net