ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ, ಮಹಾರಾಷ್ಟ್ರ ಕ್ಯಾತೆ ವಿರುದ್ಧ ಉ.ಕ. ಜನಪ್ರತಿನಿಧಿಗಳು ಮೌನ ಮುರಿಯಲಿ; ರವಿ ಖಾನಾಪುರ

RAVI KHANAPUR
ರವಿ ಖಾನಾಪುರ, ಕೃಷ್ಣಾ ಕಾಡಾ ಮಾಜಿ ನಿರ್ದೇಶಕ
Published on

ವಿಜಯಪುರ: ಮಹಾರಾಷ್ಟ್ರದಲ್ಲಿ ಉಂಟಾಗುವ ಪ್ರವಾಹಕ್ಕೂ ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರೀ ಜಲಾಶಯದ ಎತ್ತರ ಹೆಚ್ಚಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಮಹಾರಾಷ್ಟ್ರದ ಕ್ಯಾತೆ ವಿರುದ್ಧ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಮೌನ ಮುರಿಯಬೇಕೆಂದು ಕೃಷ್ಣಾ ಕಾಡಾ ಮಾಜಿ ನಿರ್ದೇಶಕ ರವಿ ಖಾನಾಪುರ ಆಗ್ರಹಿಸಿದ್ದಾರೆ.

ಕಳೆದ ಎರಡು ದಶಕಗಳಿಂದ ಆಲಮಟ್ಟಿ ಅಣೆಕಟ್ಟೆಯಲ್ಲಿ ನೀರು ನಿಲ್ಲಿಸುತ್ತಿದ್ದರೂ ವಿಜಯಪುರ, ಬಾಗಲಕೋಟೆ ಲಕ್ಷಾಂತರ ಎಕರೆ ಜಮೀನು ಮುಳುಗಡೆಯಾಗಿ ಕೋಟ್ಯಂತರ ಜನ ಸಂತ್ರಸ್ತರಾದರೂ ಅವಳಿ ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ಕೃಷಿಗಾಗಿ ನೀರಾವರಿ ಎನ್ನುವ ಬದಲು ಕುಡಿಯುವ ನೀರಿನ ಹೆಸರು ಹೇಳಿಕೊಳ್ಳುವ ದುಸ್ಥಿತಿ ಇದೆ. ಅಂಥದರಲ್ಲಿ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗುತ್ತಿದ್ದಂತೆ ಮಹಾರಾಷ್ಟ್ರ ಕ್ಯಾತೆ ತೆಗೆದಿರುವುದು ಖಂಡನೀಯ ಎಂದಿದ್ದಾರೆ.

ಮಹಾರಾಷ್ಟ್ರದ ಕ್ಯಾತೆ ವಿರುದ್ಧ ಕರ್ನಾಟಕದ ಜನಪ್ರತಿನಿಧಿಗಳು ಒಕ್ಕೋರಲ ಧ್ವನಿ ಎತ್ತಬೇಕು. ವಿಶೇಷವಾಗಿ ಕೃಷ್ಣಾ ಯೋಜನೆ ನೀರಿನ ಸೌಲಭ್ಯ ಪಡೆದಿರುವ ಉತ್ತರ ಕರ್ನಾಟಕ ಜಿಲ್ಲೆಗಳ ಹಾಲಿ- ಮಾಜಿ ಸಚಿವರು, ಸಂಸದರು, ಶಾಸಕರು, ರೈತರು ಧ್ವನಿ ಎತ್ತಬೇಕು ಎಂದು ಅವರು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net