

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಕಳೆದ ವರ್ಷ ಬೆಳ್ಳುಳ್ಳಿ ಬೆಳೆ 1 ಕ್ವಿಂಟಾಲ್ಗೆ 24 ಸಾವಿರ ರೂ.ವರೆಗೂ ಮಾರಾಟವಾದ ಹಿನ್ನೆಲೆಯಲ್ಲಿ ಈ ಬಾರಿ ತಾಲೂಕಿನ ರೈತರು ಅತ್ಯಧಿಕವಾಗಿ ಬೆಳ್ಳುಳ್ಳಿ ಬೆಳೆಯಲು ಮುಂದಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 125 ಹೆಕ್ಟೇರ್ ಪ್ರದೇಶದಷ್ಟು ಬಿತ್ತನೆ ಹೆಚ್ಚಳವಾಗಿದೆ.
ಕಳೆದ ವರ್ಷ ಬರಗಾಲದ ನಡುವೆಯೂ ತಾಲೂಕಿನಲ್ಲಿ 275 ಹೆಕ್ಟೇರ್ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆಯಲಾಗಿತ್ತು. ಹೀಗಾಗಿ ಹಲಗೇರಿ ಹಾಗೂ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ 1 ಕ್ವಿಂಟಾಲ್ ಬೆಳ್ಳುಳ್ಳಿ 18 ಸಾವಿರ ರೂಪಾಯಿಯಿಂದ 24 ಸಾವಿರ ರೂ.ವರೆಗೂ ಮಾರಾಟವಾಗಿತ್ತು. ಈ ವರ್ಷ ಸದ್ಯ ಕ್ವಿಂಟಾಲ್ ಬೆಳ್ಳುಳ್ಳಿಗೆ 14 ಸಾವಿರ ರೂಪಾಯಿ ಬೆಲೆ ಇದೆ. ಹೀಗಾಗಿ ರೈತರು ಈ ಬಾರಿ ಹೆಚ್ಚಿನ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆಯಲು ಮುಂದಾಗಿದ್ದಾರೆ. ಫಸಲು ರೈತರ ಕೈ ಸೇರಲು ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ. ತೋಟಗಾರಿಕೆ ಇಲಾಖೆಯಿಂದ ಮುಂಗಾರಿನಲ್ಲಿ 300 ಹೆಕ್ಟೇರ್ ಗುರಿ ಇಟ್ಟುಕೊಂಡಿದ್ದರೆ, ರೈತರು 400 ಹೆಕ್ಟೇರ್ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆದಿದ್ದಾರೆ. ಕಳೆದ ವರ್ಷ ಒಟ್ಟು 30 ಸಾವಿರ ಕ್ವಿಂಟಾಲ್ ಬೆಳ್ಳುಳ್ಳಿ ಬೆಳೆಯಲಾಗಿತ್ತು.
ತಾಲೂಕಿನ ಯರೇಕುಪ್ಪಿ, ಸುಣಕಲ್ಲಬಿದರಿ, ಬೆನಕನಕೊಂಡ, ಮುಷ್ಟೂರ, ಮಣಕೂರ, ಹಲಗೇರಿ, ಇಟಗಿ, ಮಾಗೋಡ ಸೇರಿ ಈ ಭಾಗದ ರೈತರು ಮೊದಲು ಹತ್ತಿ, ಉಳ್ಳಾಗಡ್ಡಿ ಬೆಳೆಯುತ್ತಿದ್ದರು. ಆದರೆ, ಹತ್ತಿ ಪಿಂಕ್ ಬೋಯರ್ ರೋಗಕ್ಕೆ ತುತ್ತಾಗಿ ನಷ್ಟ ಆಗುವ ಕಾರಣ ಹಾಗೂ ಉಳ್ಳಾಗಡ್ಡಿ ಹೆಚ್ಚಿನ ಮಳೆ ಬಂದರೆ ಮತ್ತು ಬೆಲೆ ಕುಸಿತದ ಆತಂಕದ ಕಾರಣದಿಂದ ಇದೀಗ ಈ ಎಲ್ಲ ಗ್ರಾಮಗಳ ರೈತರು ಬೆಳ್ಳುಳ್ಳಿ ಬೆಳೆ ಬೆಳೆದಿದ್ದಾರೆ.
ಕೊಂಚ ಮಳೆಯಾದರೂ ಸಾಕು ಬೆಳ್ಳುಳ್ಳಿ ಉತ್ತಮ ಇಳುವರಿ ಬರುತ್ತದೆ ಎಂಬ ನಂಬಿಕೆ ರೈತರದ್ದು. ಅಲ್ಲದೆ, ಬೆಳ್ಳುಳ್ಳಿ ಎರಡೂವರೆ ತಿಂಗಳ ಬೆಳೆಯಾಗಿದ್ದು, ಇದನ್ನು ತೆಗೆದ ನಂತರದಲ್ಲಿ ಹಿಂಗಾರಿಗೆ ಇನ್ನೊಂದು ಬೆಳೆಯನ್ನು ತೆಗೆಯಬಹುದಾಗಿದೆ. ಇನ್ನು ಈರುಳ್ಳಿಯನ್ನು ಹೆಚ್ಚು ದಿನಗಳ ಕಾಲ ಸಂಗ್ರಹ ಮಾಡಲು ಬರುವುದಿಲ್ಲ. ಆದರೆ, ಬೆಳ್ಳುಳ್ಳಿ ಬೆಳೆಯನ್ನು ಹೆಚ್ಚಿನ ದಿನಗಳ ಕಾಲ ಸಂಗ್ರಹ ಮಾಡಬಹುದಾಗಿದೆ. ಹೀಗಾಗಿ ಪ್ರಸಕ್ತ ವರ್ಷ ಉತ್ತಮ ಮಳೆಯಾದ ಕಾರಣ ರೈತರು ಬೆಳ್ಳುಳ್ಳಿಯ ಕಡೆಗೆ ಮುಖ ಮಾಡಿದ್ದಾರೆ.
ಉಳ್ಳಾಗಡ್ಡಿ, ಹತ್ತಿ ಬೆಳೆಯಿಂದ ನಷ್ಟ ಅನುಭವಿಸಿದ ರೈತರು ಈ ಬಾರಿ ಬೆಳ್ಳುಳ್ಳಿ ಬೆಳೆಯುವಲ್ಲಿ ಮುಂದಾಗಿದ್ದಾರೆ. ಈ ವರ್ಷ ಉತ್ತಮವಾದ ಮಳೆಯಾದ ಕಾರಣ ಬೆಳೆಯೂ ಚೆನ್ನಾಗಿ ಬೆಳೆಯುತ್ತಿದೆ. ಕಳೆದ ವರ್ಷ ರೈತರಿಗೆ ಉತ್ತಮ ಬೆಲೆ ದೊರೆತಿದೆ. ಈ ವರ್ಷವೂ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಿದೆ. | ನೂರಅಹ್ಮದ್ ಹಲಗೇರಿ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ರಾಣೆಬೆನ್ನೂರ ಕಳೆದ ವರ್ಷ ಉಳ್ಳಾಗಡ್ಡಿ ಬೆಳೆದಾಗ ಆರಂಭದಲ್ಲಿ ಚೆನ್ನಾಗಿದ್ದ ಬೆಲೆ ನಮ್ಮ ಬೆಳೆ ಬರುವ ಸಮಯದಲ್ಲಿ ಪಾತಾಳಕ್ಕೆ ಕುಸಿಯಿತು. ಇದರಿಂದ ಮಾರುಕಟ್ಟೆಗೆ ಉಳ್ಳಾಗಡ್ಡಿ ಸಾಗಿಸುವ ಬದಲು ಜಮೀನಿನಲ್ಲಿಯೇ ರೋಟರ್ ಹೊಡೆದಿದ್ದೆವು. ನಮ್ಮ ಪಕ್ಕದಲ್ಲಿಯೇ ಬೆಳ್ಳುಳ್ಳಿ ಬೆಳೆದವರು ಉತ್ತಮ ಬೆಲೆಗೆ ಮಾರಾಟ ಮಾಡಿದ್ದರು. ಆದ್ದರಿಂದ ಅವರ ಸಲಹೆ ಮೇಲೆ ನಾವು ಬೆಳ್ಳುಳ್ಳಿ ಬೆಳೆದಿದ್ದೇವೆ. ಚೆನ್ನಾಗಿ ಮಳೆ ಬಂದ ಹಿನ್ನೆಲೆಯಲ್ಲಿ ಬೆಳೆ ಉತ್ತಮವಾಗಿ ಬೆಳೆದಿದೆ. ಉತ್ತಮ ಬೆಲೆ ದೊರೆತರೆ ಅನುಕೂಲವಾಗಲಿದೆ. | ಫಕೀರಪ್ಪ ಎನ್., ಬೆಳ್ಳುಳ್ಳಿ ಬೆಳೆದ ರೈತ