

ಮೈಸೂರು: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಎರಡು ದಿನಗಳ ಕಾಲ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಮಹಿಳಾ ಕಾರ್ಯಕರ್ತೆಯರ ಶಿಬಿರಕ್ಕೆ ಶನಿವಾರ ಚಾಲನೆ ದೊರೆಯತು.
ಎಐಎಂಎಸ್‌ಎಸ್ ರಾಷ್ಟ್ರೀಯ ಉಪಾಧ್ಯಕ್ಷೆ ಡಾ .ಸುಧಾ ಕಾಮತ್ ಮಾತನಾಡಿ, ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿದೆ. ಬಾಲ್ಯ ವಿವಾಹದಿಂದ ಸಣ್ಣ ವಯಸ್ಸಿನಲ್ಲಿಯೇ ಗರ್ಭಿಣಿಯಾಗುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಗರ್ಭದರಿಸುವ ಮಕ್ಕಳ ಸಾಮಾಜಿಕವಾಗಿ, ಆರ್ಥಿಕವಾಗಿ, ದೈಹಿಕವಾಗಿ ಸದೃಢವಾಗಿರುವುದಿಲ್ಲ. ಇಂತಹ ಹೆಣ್ಣು ಮಕ್ಕಳಿಗೆ ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊರೆಸುವುದು, ಅವರ ಸಾಮಾಜಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಹಾಗಾಗಿ ಈ ಸಮಸ್ಯೆಯ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ಹೆಣ್ಣೆಂದರೆ ತಾತ್ಸಾರವಾಗಿ ಕಾಣುವ ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಗವನ್ನು ತಾಯಿಯ ಹೊಟ್ಟೆಯಲ್ಲಿರುವಾಗಲೇ ಚಿವುಟಿ ಹಾಕಲಾಗುತ್ತಿದೆ. ಗರ್ಭದಿಂದ ಹಿಡಿದು ಹೆಣ್ಣು, ಜನಿಸಿ ಸಾಯುವವರೆಗೂ ಅವಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಎದುರಿಸಬೇಕಾಗಿದೆ ಎಂದರು.
ಎಐಎಂಎಸ್‌ಎಸ್ ರಾಜ್ಯಾಧ್ಯಕ್ಷೆ ಎಂ.ಎನ್. ಮಂಜುಳಾ ಮಾತನಾಡಿ, ಸಮಾಜದಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಚಿತ್ರದುರ್ಗದಲ್ಲಿ ಬಲವಂತವಾಗಿ ನಡೆಸುತ್ತಿದ್ದ ಅಪ್ರಾಪ್ತ ಬಾಲಕಿ ವಿವಾಹವನ್ನು ಒಪ್ಪಿಕೊಳ್ಳದೆ ಪ್ರತಿಭಟಿಸಿದ ಪ್ರಕರಣ ಈ ಸಮಸ್ಯೆಗೆ ಹಿಡಿದ ಕನ್ನಡಿಯಂತಿದೆ. ಇದು ಎಲ್ಲರಿಗೂ ತಿಳಿದ ವಿಷಯ. ಇಷ್ಟಾದರೂ ಸರ್ಕಾರಕ್ಕೆ ಸಮಸ್ಯೆಯ ತೀವ್ರತೆ ಅರ್ಥ ಆಗುತ್ತಿಲ್ಲವೇ? ಸರ್ಕಾರಗಳು ಭೇಟಿ ಬಚಾವೋ ಭೇಟಿ ಪಡಾವೋ ಎಂಬ ಘೋಷಣೆಗಳಿಗೆ ಮಾತ್ರ ಸೀಮಿತವಾಗುತ್ತಿದೆ ಹೊರತು ತಾವು ಹೇಳಿದಂತೆ ನುಡಿಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಣ್ಣು ಹುಟ್ಟುವುದಕ್ಕೂ ನಿರಾಕರಿಸುವ ಈ ಸಮಾಜದಲ್ಲಿ ನಾವಿಂದು ಬದುಕುತ್ತಿದ್ದೇವೆ. ಹೆಣ್ಣು ಹುಟ್ಟಿದ ಮೇಲೆ ಅವಳಿಗೆ ಒಂದು ಗೌರವಹಿತವಾದ ಜೀವನವನ್ನು ರೂಪಿಸಿಕೊಳ್ಳುವುದು ಒಂದು ದೊಡ್ಡ ಸವಾಲೇ ಆಗಿದೆ. ತನ್ನ ಹುಟ್ಟನ್ನು ಖಾತ್ರಿ ಪಡಿಸಿ ನಂತರ ಬದುಕನ್ನು ಕಟ್ಟಿಕೊಳ್ಳವಲ್ಲಿ ಹೆಣ್ಣು ಪ್ರತಿ ಹಂತದಲ್ಲೂ ಹೆಣಗಾಡುವ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಗಳಿಗೆ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುವವರೆಗೂ ಮಹಿಳೆಯರು ಒಗ್ಗಟ್ಟಾಗಿ ಆಗ್ರಹಿಸಬೇಕಿದೆ ಆ ನಿಟ್ಟಿನಲ್ಲಿ ಸಂಘಟಿತರಾಗುವುದು ಈ ಘಳಿಗೆಯ ತುರ್ತು ಎಂದು ಹೇಳಿದರು.
ಎಐಎಂಎಸ್‌ಎಸ್ ರಾಜ್ಯ ಉಪಾಧ್ಯಕ್ಷೆ ಜಿ.ಎಸ್. ಸೀಮಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಎಸ್. ಶೋಭಾ ಇದ್ದರು.