ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

Covid
Published on

ಮೈಸೂರು: ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ಪರೀಕ್ಷೆಗಳನ್ನು ನಡೆಸುವಂತೆ ನಿರ್ದೇಶನ ನೀಡಿದರು.

ಬೆಡ್‌ಗಳ ವ್ಯವಸ್ಥೆ ಮಾಡಬೇಕು. ಔಷಧಗಳ ದಾಸ್ತಾನಿಗೆ ಕ್ರಮವಹಿಸಬೇಕು. ಆಂಬುಲೆನ್ಸ್ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದರ ಜತೆಗೆ ಆಕ್ಸಿಜನ್ ಪ್ಲಾಂಟ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು ಸಾಮಾನ್ಯ. ಅದಕ್ಕೆ ಹೆದರುವುದು ಬೇಡ. ವೈದ್ಯರಿಂದ ಚಿಕಿತ್ಸೆ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆಯಬೇಕು ಎಂದು ನಾಗರಿಕರಿಗೆ ಸಲಹೆ ನೀಡಿದ ಅವರು, ವೃದ್ಧರು ರಕ್ತದೊತ್ತಡ, ಸಕ್ಕರೆ ಮಟ್ಟ ನಿಯಂತ್ರಣ ಹಾಗೂ ಆರೋಗ್ಯದ ಕಡೆ ಹೆಚ್ಚು ಗಮನಹರಿಸಲು ಅರಿವು ಮೂಡಿಸಿ ಎಂದು ತಿಳಿಸಿದರು.

‘ಪ್ರತಿ ತಾಲೂಕಿನಲ್ಲಿಯೂ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಬೆಂಗಳೂರು ಬಿಟ್ಟರೆ ಮೈಸೂರಿನಲ್ಲಿ ಪಾಸಿಟಿವಿಟಿ ಹೆಚ್ಚಾಗಿದೆ. ಕಳೆದ 8 ದಿನಗಳಲ್ಲಿ ಮೂರು ಜನ ಮೃತಪಟ್ಟಿದ್ದು, 84 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಭಾನುವಾರವೂ 25 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 20 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ಮಹಾದೇವ ಪ್ರಸಾದ್ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಅಪರ ಜಿಲ್ಲಾಧಿಕಾರಿ ಆರ್.ಲೋಕನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net