

ಬೆಂಗಳೂರು: ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಕೆಎಸ್‌ಆರ್‌ಟಿಸಿ ನೌಕರರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಮೊತ್ತವನ್ನು ೩.೦೦ ಲಕ್ಷ ರೂ.ಗಳಿಂದ ೧೦ ರೂ. ಲಕ್ಷಗಳಿಗೆ ಏರಿಕೆ ಮಾಡಿ ನಿಗಮ ಆದೇಶ ಹೊರಡಿಸಿದೆ. ಈ ಮೂಲಕ ಕೆಎಸ್ ಆರ್‌ಟಿಸಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.
ಕೆಎಸ್‌ಆರ್‌ಟಿಸಿಯಲ್ಲಿ ಈಗಾಗಲೇ ಸೇವೆಯಲ್ಲಿರುವಾಗ ಸಿಬ್ಬಂದಿ ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆಯಡಿ, ೧ ಕೋಟಿ ರೂ. ಮೊತ್ತದ ಆರ್ಥಿಕ ಪರಿಹಾರ ಒದಗಿಸುತ್ತಿದ್ದು, ಇಲ್ಲಿಯವರೆಗೆ ೭ ಪ್ರಕರಣಗಳಲ್ಲಿ ಅಪಘಾತದಿಂದ ಮರಣ ಹೊಂದಿದ ನೌಕರರ ಅವಲಂಬಿತರಿಗೆ ತಲಾ ರೂ.೧ ಕೋಟಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬದವರಿಗೆ ಅಂದರೆ ಕ್ಯಾನ್ಸರ್, ಸ್ಟ್ರೋಕ್, ಹೃದಯಾಘಾತ, ಕಿಡ್ನಿ ವೈಫಲ್ಯ ಸೇರಿ ಇತರೆ ಖಾಯಿಲೆಗಳಿಂದ ಪ್ರತಿ ವರ್ಷ ೧೦೦ ನೌಕರರು ಮರಣ ಹೊಂದುತ್ತಿದ್ದಾರೆ. ಈ ರೀತಿ ತಮ್ಮ ಸೇವಾವಧಿಯಲ್ಲಿ ಮರಣ ಹೊಂದುತ್ತಿರುವ ನೌಕರರ ಕುಟುಂಬದವರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ನಿಗಮದಿಂದ ಅವರಿಗೆ ನೆರವಾಗಲು ೩.೦೦ ಲಕ್ಷ ರೂ.ನೀಡುತ್ತಿದ್ದ ಪರಿಹಾರ ಮೊತ್ತವನ್ನು ಹೆಚ್ಚಿಸುವ ಸದುದ್ದೇಶದಿಂದ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದಲೂ ಸಹ ಬೇಡಿಕೆ ಬಂದ ಹಿನ್ನೆಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರವನ್ನು ೩.೦೦ ರೂ. ಲಕ್ಷದಿಂದ ೧೦.೦೦ ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಮೃತರ ಅವಲಂಬಿತರಿಗೆ ೭ ಲಕ್ಷ ರೂ. ಹೆಚ್ಚುವರಿ ಪರಿಹಾರ ಮೊತ್ತ ಲಭ್ಯವಾಗುತ್ತದೆ.
ಕಾರ್ಮಿಕರ ಜೀವ ಅಮೂಲ್ಯವಾದದ್ದು, ಜೀವಕ್ಕೆ ಯಾವುದೇ ರೀತಿಯಿಂದಲೂ ಬೆಲೆ ಕಟ್ಟಲಾಗುವುದಿಲ್ಲ. ಆದರೆ ನೌಕರರು ಮರಣ ಹೊಂದಿದ್ದಲ್ಲಿ, ಅವರ ಅವಲಂಬಿತರಿಗೆ ಆದಷ್ಟೂ ಆರ್ಥಿಕವಾಗಿ ಸಹಾಯ ಮಾಡುವುದು ನಿಗಮದ ಸದುದ್ದೇಶವಾಗಿದೆ.
ಈ ಯೋಜನೆಗೆ ನೌಕರರ ಮಾಸಿಕ ವಂತಿಕೆಯನ್ನು ಪ್ರಸ್ತುತ ೧೦೦ ರೂ.ಗಳಿಂದ ೨೦೦ ರೂ. ಗಳಿಗೆ ಹಾಗೂ ನಿಗಮದ ವತಿಯಿಂದ ಪ್ರತಿ ನೌಕರರ ಪರವಾಗಿ ನೀಡಲಾಗುತ್ತಿರುವ ೫೦ ರೂ.ಗಳ ವಂತಿಕೆಯನ್ನು ೧೦೦ ರೂ.ಗಳಿಗೆ ಹೆಚ್ಚಿಸಿ, ಪರಿಷ್ಕರಿಸಲಾಗಿದೆ.
ಈ ಪರಿಷ್ಕೃತ ಆದೇಶವು ನ.೧ರಿಂದ ಜಾರಿಗೆ ಬರಲಿದ್ದು, ಈ ದಿನಾಂಕದ ನಂತರದಲ್ಲಿ ಉಂಟಾಗುವ ಮರಣ ಪ್ರಕರಣಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.