

ಮಂಗಳೂರು: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ನೇರ ಪರಿಣಾಮ ಕರಾವಳಿಗಾಗಿದ್ದು, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಗುರುವಾರ ರಾತ್ರಿ ಅತೀ ಹೆಚ್ಚು ಚಳಿಯ ಅನುಭವವಾಗಿದೆ. ಈ ಚಳಿ ಮುಂದಿನ 1 ವಾರಕ್ಕೂ ಅಧಿಕ ದಿನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ತಾಪಮಾನದಲ್ಲಿ 3-4 ಡಿ.ಸೆ. ತಗ್ಗಲಿದೆ. ನ.29ರಿಂದ ಒಂದು ವಾರ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ. ಕರಾವಳಿ ಭಾಗದಲ್ಲಿ ಈ ವರ್ಷ ಚಳಿ ಹೆಚ್ಚಿರುವ ಸಾಧ್ಯತೆ ಇದೆ. ದ.ಕ ಹಾಗೂ ಉಡುಪಿಜಿಲ್ಲೆಯಲ್ಲಿ ಹಗಲು ಪ್ರಖರ ಬಿಸಿಲಿನ ವಾತಾವರಣ ಮತ್ತು ಸಂಜೆ ಚಳಿ ಹೆಚ್ಚಾಗಿದ್ದು, ಮುಂಬರುವ ವಾರಗಳಲ್ಲಿ ತಾಪಮಾನ ಇನ್ನಷ್ಟು ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಲಭ್ಯ ಮಾಹಿತಿಯಂತೆ ಕರಾವಳಿಯಲ್ಲಿ ಗ್ರಾಮೀಣ ಬಾಗದಲ್ಲಿ ಸರಾಸರಿ ಕನಿಷ್ಠ ತಾಪಮಾನವು 22-23 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು. ಶುಕ್ರವಾರ 30 ಡಿಗ್ರಿ ಸೆಲ್ಸಿಯೆಸ್ ಗರಿಷ್ಠ, 22.9 ಡಿಗ್ರಿ ಸೆಲ್ಸಿಯೆಸ್ ಉಷ್ಣಾಂಶ ದಾಖಲಾಗಿದೆ.
*ರಾತ್ರಿಯಿಡಿ ಮಂಜು ಆವರಿಕೆ
2 ದಿನಗಳಿಂದ ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಸಹಿತ ಹಲವೆಡೆ ರಾತ್ರಿ ವೇಳೆ ಅತೀ ಹೆಚ್ಚು ಮಂಜು ಆವರಿಸಿತ್ತು. ಆರಂಭದಲ್ಲಿ ಹೊಗೆ ಇರಬಹುದೇನೋ ಎಂಬ ಭ್ರಮೆ ಆವರಿಸಿದ್ದರೂ, ನಿಧಾನವಾಗಿ ಚಳಿ ಆವರಿಸಿದ್ದರಿಂದ ಜನತೆಗೆ ಮಂಜು ಕವಿದ ಸ್ಪಷ್ಟ ಚಿತ್ರಣ ದೊರಕಿತು. ಈ ಮಧ್ಯೆ ಘಾಟಿ ಪ್ರದೇಶ ಶಿರಾಡಿ ಹಾಗೂ ಚಾರ್ಮಾಡಿ ಪ್ರದೇಶಗಳಲ್ಲಿ ತಗ್ಗು ಪ್ರದೇಶಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಮಂಜು ಆವರಿಸಿಕೊಳ್ಳುತ್ತಿದೆ. ಹಗಲಿನಲ್ಲಿ ಜಾಸ್ತಿ ಬಿಸಿಯಾಗಿರದ ಉತ್ತಮ ವಾತಾವರಣ ವಿದ್ದರೂ, ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಸೆಕೆ ಅನುಭವವಾಗುತ್ತಿದೆ. ಗ್ರಾಮಾಂತರ ಭಾಗದಲ್ಲಂತೂ ಸಾಯಂಕಾಲದಿಂದಲೇ ತುಸು ಚಳಿಯ ಅನುಭವವಾಗುತ್ತಿದೆ. ಬೆಳಗ್ಗೆ ಸೂರ್ಯೋಧಯಕ್ಕೂ ಮುನ್ನ ಗಿಡ-ಮರಗಳ ಮೇಲೆ ಇಬ್ಬನಿ ಬಿಳುತ್ತಿರುವುದು ಸಹಜವಾಗುತ್ತಿದ್ದರೂ, ರಾತ್ರಿಯಿಡಿ ಮಂಜು ಆವರಿಸಿಕೊಳ್ಳುತ್ತಿದೆ.