ಸೈನಿಕರನ್ನು ಗುರುತಿಸುವ ನಾಗರಿಕ ಪ್ರಜ್ಞೆ ಹೆಚ್ಚಳ : ಆದರ್ಶ ಗೋಖಲೆ ಅನಿಸಿಕೆ

Bel_Yodha
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕಾರ್ಗಿಲ್ ವಿಜಯದ ಬಳಿಕ ವೀರ ಯೋಧರನ್ನು ಗುರುತಿಸಿ ಗೌರವಿಸುವ ನಾಗರಿಕ ಪ್ರಜ್ಞೆ ಹೆಚ್ಚಾಗಿದೆ ಎಂದು ಅಂಕಣಕಾರ ಆದರ್ಶ ಗೋಖಲೆ ಹೇಳಿದರು.

ಬುಧವಾರ ಮದ್ದಡ್ಕದ ವೀರಯೋಧ ಏಕನಾಥ ಶೆಟ್ಟಿ ಸಭಾ ವೇದಿಕೆಯಲ್ಲಿ ನಾಗರಿಕ ಅಭಿನಂದನಾ ಸಮಿತಿ, ಕುವೆಟ್ಟು ಹಾಗೂ ಓಡಿಲ್ನಾಳ ಗ್ರಾಮದ 35 ಸಂಘ ಸಂಸ್ಥೆಗಳ ವತಿಯಿಂದ ಭಾರತೀಯ ಭೂಸೇನೆಯಲ್ಲಿ 24 ವರ್ಷ ಸೇವೆಗೈದು ನಿವೃತ್ತಿಹೊಂದಿ ತಾಯ್ನಡಿಗೆ ಆಗಮಿಸಿದ ಯೋಧ ಮಂಜುನಾಥ ಹಾಗೂ ಸರ್ಕಾರಿ ಪ್ರೌಢಶಾಲೆ ಗುರುವಾಯನಕೆರೆಯ ಚಿತ್ರಕಲಾ ಶಿಕ್ಷಕ ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವಿಶ್ವನಾಥ ಗೌಡ (ವಿ.ಕೆ. ವಿಟ್ಲ) ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಬರೋಡ ತುಳುಕೂಟದ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಾಗರಿಕ ಅಭಿನಂದನಾ ಸಮಿತಿ ಅಧ್ಯಕ್ಷ ಬೆಳ್ತಂಗಡಿಯ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ಸ್ವಾಗತಿಸಿ, ನಾಗರಿಕ ಅಭಿನಂದನಾ ಸಮಿತಿ ಪ್ರಧಾನ ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ ವಂದಿಸಿದರು. ನಿತಿನ್ ಗುರುವಾಯನಕೆರೆ ನಿರೂಪಿಸಿದರು.

ಮಾಜಿ ಶಾಸಕ, ನಾಗರಿಕ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಕೆ.ಪ್ರಭಾಕರ ಬಂಗೇರ, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ವಿದ್ವತ್ ಕಾಲೇಜಿನ ಮುಖ್ಯಸ್ಥ ಸುಭಾಶ್ಚಂದ್ರ ಶೆಟ್ಟಿ, ಕುವೆಟ್ಟು ಗ್ರಾಪಂ ಅಧ್ಯಕ್ಷೆ ಭಾರತಿ ಶೆಟ್ಟಿ, ಅರಮಲೆ ಬೆಟ್ಟ ಕ್ಷೇತ್ರದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು, ಪ್ರವೀಣ್ ಕುಮಾರ್ ಅಜ್ರಿ ಪಾಡ್ಯಾರುಬೀಡು, ಅಭಿನಂದನಾ ಸಮಿತಿ ಸಂಚಾಲಕ ಗಂಗಾಧರ ರಾವ್ ಕೆವುಡೇಲು, ಬಳ್ಳಮಂಜ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ.ಹರ್ಷ ಸಂಪಿಗೆತ್ತಾಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಕೆ.ಜೈನ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕ ಅಭಿನಂದನಾ ಸಮಿತಿ ಸದಸ್ಯರು, ಊರವರು ಉಪಸ್ಥಿತರಿದ್ದರು.

ಶಿಕ್ಷಕ-ರಕ್ಷಕ ಅಭಿನಂದನಾ ಸಮಾರಂಭ ಅನುಕರಣೀಯ. ಮುಂದೆ ನಡೆಯುವ ಎಲ್ಲ ಸಭೆ, ಸಮಾರಂಭಗಳಲ್ಲಿ ಯೋಧರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿ ಅವರನ್ನು ಸಾರ್ವಜನಿಕರು ಗುರುತಿಸುವಂತೆ ಮಾಡಬೇಕು. ಶಶಿಧರ ಬಿ.ಶೆಟ್ಟಿ ಬರೋಡ ತುಳುಕೂಟದ ಅಧ್ಯಕ್ಷ

ಮೆರವಣಿಗೆ

ಲಾಲ ಶ್ರೀ ವೆಂಕಟರಮಣ ದೇವಸ್ಥಾನದಿಂದ ಕಿಗೋಳಿಯವರೆಗೆ ಯೋಧರಾದ ಮಂಜುನಾಥ್ ಅವರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ವಿ.ಕೆ.ವಿಟ್ಲ ಅವರನ್ನು ಗುರುವಾಯನಕೆರೆಯಲ್ಲಿ ಸ್ವಾಗತಿಸಿ ಮದ್ದಡ್ಕ-ಕಿಗೋಳಿಯಿಂದ ಭವ್ಯ ಮೆರವಣಿಗೆಯಲ್ಲಿ ಕಾಲ್ನಡಿಗೆಯ ಮೂಲಕ ಸೈನಿಕ-ಶಿಕ್ಷಕರನ್ನು ಸಭಾಂಗಣಕ್ಕೆ ಕರೆತರಲಾಯಿತು. ನಂತರ ವೈಯಕ್ತಿಕ ಹಾಗೂ ಸಂಘ-ಸಂಸ್ಥೆಗಳಿಂದ ಅಭಿನಂದನೆ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net