

ರಾಯಚೂರು: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಟಿಯುಸಿಯಿಂದ ಸ್ಥಳೀಯ ಸಂಸದ ರಾಜಾ ಅಮರೇಶ್ವರ ನಾಯಕ ಕಚೇರಿ ಮುಂಚೆ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಸಂಸದರ ಆಪ್ತ ಕಾರ್ಯದರ್ಶಿ ಶ್ರೀನಿವಾಸಗೆ ಮನವಿ ಸಲ್ಲಿಸಿ, ಮುಂಬರುವ ಚಳಿಗಾಲದ ಅವೇಶನದಲ್ಲಿ ಸ್ಕೀಂ ನೌಕರರ ಸಮಸ್ಯೆಗಳು ಮತ್ತು ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೇ.90 ಹಾಗೂ ರಾಜ್ಯ ಸರ್ಕಾರ ಶೇ.10ರಷ್ಟು ಅನುಪಾತದಲ್ಲಿ ಅನುದಾನ ನೀಡುತ್ತಿದ್ದವು. ಆದರೆ 2015ರ ನಂತರದಲ್ಲಿ ಕೇಂದ್ರ ಸರ್ಕಾರ ಅನುದಾನ ಕಡಿತಗೊಳಿಸಿ ಕೇಂದ್ರದಿಂದ ಶೇ.60 ಮತ್ತು ರಾಜ್ಯ ಪಾಲು ಶೇ.40ರಷ್ಟು ಮಾಡಿದೆ. ಜತೆಗೆ ಅನುದಾನವೂ ಸಕಾಲಕ್ಕೆ ಬಿಡುಗಡೆ ಮಾಡುತ್ತಿಲ್ಲ.
ಸ್ಕೀಂ ನೌಕರರಿಗೆ ನೀಡುತ್ತಿರುವ ಗೌರವಧನ ಅತ್ಯಂತ ಕಡಿಮೆಯಾಗಿದ್ದು, ಬೆಲೆ ಏರಿಕೆ ತಕ್ಕಂತೆ ಗೌರವಧನವನ್ನು ಹೆಚ್ಚಳ ಮಾಡಬೇಕು. ಐಎಸ್‌ಐ ವ್ಯಾಪ್ತಿಗೆ ಸೇರಿಸಬೇಕು. ಎಲ್ಲ ಸ್ಕೀಂ ನೌಕರರನ್ನು ಕಾಯಂಗೊಳಿಸಬೇಕು. ಗುಣಮಟ್ಟದ ಮೊಬೈಲ್‌ಗಳನ್ನು ಕಾರ್ಯಕರ್ತೆಯರಿಗೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಗೌರವಾಧ್ಯಕ್ಷ ಡಿ.ಎಚ್.ಕಂಬಳಿ, ಜಿಲ್ಲಾಧ್ಯಕ್ಷೆ ಸುಲೋಚನಾ, ಪದಾಕಾರಿಗಳಾದ ಲಲಿತಾ, ಸಿದ್ರಾಮಯ್ಯ ಸ್ವಾಮಿ, ಸರಸ್ವತಿ ಬೇರಿ, ಚಂದ್ರಶೇಖರ, ಮಂಜುಳಾ, ತಾಯಮ್ಮ, ಅನುರಾಧಾ ಪಾಲ್ಗೊಂಡಿದ್ದರು.