

ಇಳಕಲ್ಲ.(ಗ್ರಾ): ಸರ್ಕಾರಿ ಶಾಲೆಗಳಿಗೆ ದಾಖಲಾತಿ ಹೆಚ್ಚಿಸುವ ಕೆಲಸ ಶಿಕ್ಷಣ ಪ್ರೇಮಿಗಳಿಂದ ನಡೆಯಬೇಕು ಎಂದು ಬೆಂಗಳೂರು ಹೈಕೋರ್ಟ್ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಹೇಳಿದರು.
ಸ್ಥಳೀಯ ಸರ್ಕಾರಿ ಪ್ರಾಥಮಿಕ ಸೆಂಟ್ರಲ್ ಸ್ಕೂಲ್‌ಗೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಹಳಷ್ಟು ಪ್ರಗತಿಪರ ಜನರು ಮುಂದೆ ಬರುತ್ತಿದ್ದಾರೆ. ಶಿಕ್ಷಕರು ಅಂತವರ ಸಹಾಯ ಪಡೆದುಕೊಂಡು ಶಾಲೆಗಳ ಮೂಲಸೌಕರ್ಯ ಸುಧಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಮಾತನಾಡಿ, ಪಾಲಕರಿಗೆ ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸ ಬರುವಂತಹ ಕಾರ್ಯ ನಡೆಯಬೇಕು. ಅದಕ್ಕಾಗಿ ಎಲ್ಲರೂ ಸ್ವಇಚ್ಛೆಯಿಂದ ಕೆಲಸ ಮಾಡಬೇಕು ಎಂದರು.
ಮುಖ್ಯ ಶಿಕ್ಷಕ ಶ್ರೀಧರ ಜೋಗಿನ ಮಾತನಾಡಿ, ಮೇ 19 ರಂದು ಶಾಲೆ ವತಿಯಿಂದ ಕರಪತ್ರಗಳ ಮೂಲಕ ಶಾಲೆಯಲ್ಲಿ ಸಿಗುವ ಸೌಲಭ್ಯ ಕುರಿತು ಮಾಹಿತಿ ನೀಡುವ ಜತೆಗೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಲು ಪಾಲಕರಲ್ಲಿ ಜಾಗೃತಿ ಮೂಡಿಸುವ ಜಾಥಾ ಹಮ್ಮಿಕೊಳ್ಳಲಾಗುವದು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ, ವಿನೋದ ಭೋವಿ, ಆಲೂರ, ಸಾಮಾಜಿಕ ಹೋರಾಟಗಾರ ಪ್ರಶಾಂತ ಹಂಚಾಟೆ, ವೆಂಕಟೇಶ ಬಡಿಗೇರ, ಶಂಕರ ಚಿನ್ನಾಪೂರ, ಸುರೇಶ ಜಿಗಜಿನ್ನಿ, ಶಿವಶಂಕರ ಬೇನಾಳ, ವಿಷ್ಣು ಅರಳಿಕಟ್ಟಿ, ಬಾಬು ರಾಜೊಳ್ಳಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು.