ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ಫಲಿತಾಂಶ ಹೆಚ್ಚಿಸಿ

30-2
ಸಭೆಯಲ್ಲಿ ಜಿಲ್ಲಾ ಪಂಚಾಯತ್​ ಸಿಇಒ ಪ್ರವಿಣ್​ ಪಿ.ಬಾಗೇವಾಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್​, ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿಷಯ ಪರಿವೀಕ್ಷಕರು, ಶಿಕ್ಷಣ ಕೋ ಆರ್ಡಿನೆಟರ್​ಗಳು, ವಸತಿ ಶಾಲೆಗಳ ಪ್ರಾಂಶುಪಾಲರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Published on

ಜಿಲ್ಲಾಧಿಕಾರಿ ಡಾ.ರವಿ ನಿರ್ದೇಶನ - ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಸುವಂತೆ ಸಲಹೆ

ಕೋಲಾರ: ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆಯಲ್ಲಿ ಜಿಲ್ಲೆ ಉತ್ತಮ ಫಲಿತಾಂಶ ಸಾಧಿಸುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು. ಕಲಿಕೆಯಲ್ಲಿ ಹಿಂದಿರುವ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಸುಧಾರಣಾ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ನಿರ್ದೇಶಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣಾ ಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಮಾರ್ಗದರ್ಶನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಎಲ್ಲ ಕ್ಷೇತ್ರದಲ್ಲಿಯೂ ಒತ್ತಡ ಇರುವಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಒತ್ತಡದ ಪರಿಸ್ಥಿತಿ ಇದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಸಾಮಾಜಿಕ ಸಮಸ್ಯೆ, ಕಲಿಕೆಗೆ ಅವಶ್ಯವಾದ ಮೂಲಸೌಕರ್ಯಗಳಿಲ್ಲದಿರುವುದು ಸೇರಿ ಇತರ ಕಾರಣಗಳಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಲಿದೆ. ಈ ಎಲ್ಲ ಸಮಸ್ಯೆಗಳನ್ನು ಮೀರಿ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕಾದ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರತಿಯೊಬ್ಬ ಶಿಕ್ಷಕರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಾಲಕರು ಸಹ ಶಿಕ್ಷಕನ್ನು, ಮಕ್ಕಳನ್ನು ಪ್ರೇರೇಪಿಸುವ ಕೆಲಸ ಮಾಡಬೇಕು ಎಂದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯು ಅಳವಡಿಸಿಕೊಂಡಿರುವ 14 ಹಾಗೂ 20 ಅಂಶಗಳ ಕಾರ್ಯಕ್ರಮಗಳ ಅಂಶಗಳನ್ನು ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು, ಜಿಲ್ಲೆಯ ಕುಂದುಕೊರತೆ ಪರಿಹರಿಸಲು ಕ್ರಮವಹಿಸಲಾಗುವುದು. ಕಳೆದ ಬಾರಿಯ ನ್ಯೂನತೆಗಳನ್ನು ಸರಿಪಡಿಸಿಕೊಂಡು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಫಲಿತಾಂಶ ನೀಡಲು ಎಲ್ಲರ ಪರಿಶ್ರಮ ಅವಶ್ಯ ಎಂದರು. ಸಂವಾದ: ಜಿಲ್ಲೆಯಲ್ಲಿ ಮಕ್ಕಳ ಕಲಿಕಾ ಸುಧಾರಣೆಗೆ ಅಗತ್ಯವಿರುವ ಮೂಲಸೌಲಭ್ಯ, ವಸತಿ ವ್ಯವಸ್ಥೆ, ಕಲಿಕಾ ವಾತಾವರಣ, ಪ್ರಶ್ನೆಪತ್ರಿಕೆಗಳ ಬ್ಲೂ ಪ್ರಿಂಟ್​ ಒದಗಿಸಲು ಆದ್ಯತೆ ನೀಡಲಾಗುವುದು.

ಅಲ್ಲದೆ ವಿವಿಧ ಇಲಾಖೆಗಳ ವಸತಿ ಶಾಲೆಗಳಿಗೆ ಆಯಾ ಇಲಾಖೆ ಅಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ, ಕಲಿಕಾ ಹಿನ್ನಡೆ ಕಂಡುಬಂದಿರುವ ಮಕ್ಕಳು, ಶಿಕ್ಷಕರು, ಪಾಲಕರೊಂದಿಗೆ ಸಂವಾದ ನಡೆಸಿ ಫಲಿತಾಂಶ ಹೆಚ್ಚಳಕ್ಕೆ ಪ್ರೇರೇಪಿಸಲಾಗುವುದು. ಒಟ್ಟಾರೆ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಶಿಕ್ಷಣ ಇಲಾಖೆ ಕೈಗೊಳ್ಳುವ ಸುಧಾರಣಾ ಕ್ರಮಗಳಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಡಿಸಿ ಭರವಸೆ ನೀಡಿದರು.

ವಿದ್ಯಾರ್ಥಿ ಗೈರಾದರೆ ಪಾಲಕರಿಗೆ ಮಾಹಿತಿ ನೀಡಿ: ಫಲಿತಾಂಶದಲ್ಲಿ ಹಿನ್ನಡೆಯಾಗಿರುವ ಶಾಲೆಗಳಲ್ಲಿ ಮುಖ್ಯವಾಗಿ ಯಾವ ವಿಷಯಗಳ ಕಲಿಕೆಯಲ್ಲಿ ಮಕ್ಕಳು ಹಿಂದೆ ಉಳಿದಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಇಲಾಖೆ ಅಳವಡಿಸಿಕೊಂಡಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಉತ್ತಮ ಫಲಿತಾಂಶ ನೀಡುವಂತೆ ಪ್ರೇರೇಪಿಸಬೇಕು. ಶಾಲೆಗೆ ಗೈರು, ಸರಾಸರಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪಾಲಕರಿಗೆ ಅರಿವು ಮೂಡಿಸಬೇಕು ಎಂದು ಡಿಸಿ ತಿಳಿಸಿದರು.ಕೊರತೆ ಅರಿಯಿರಿ: ಎಸ್ಸೆಸ್ಸೆಲ್ಸಿಪರೀಕ್ಷೆ- 1, 2 ಮತ್ತು 3ರಲ್ಲಿ ಎಲ್ಲ ತಾಲೂಕುಗಳಲ್ಲಿನ ಫಲಿತಾಂಶದಲ್ಲಿ ಬಾಲಕರ ಫಲಿತಾಂಶಕ್ಕೆ ಹಿನ್ನಡೆಯಾಗಿದೆ. ಇದು ಬದಲಾಗಬೇಕು. ಪಾಲಕರ ಸಹಕಾರ ಹಾಗೂ ಮಕ್ಕಳ ಬುದ್ಧಿಶಕ್ತಿ ವೃದ್ಧಿಗೆ ವಿಶ್ಲೇಷಣೆಯಾಗಬೇಕು. ಕಲಿಕೆಯಲ್ಲಿ ಹಿನ್ನಡೆ ಕಂಡಿರುವ ಪ್ರತಿ ಮಕ್ಕಳನ್ನು ಸೂಕ್ಷಮವಾಗಿ ಗಮನಿಸಿ, ಶಿಕ್ಷಕರು ಪರಿಶೀಲಿಸಬೇಕು. ಎಲ್ಲಿ, ಏನು ಕೊರತೆಯಾಗಿದೆ ಎಂಬುದನ್ನು ಅರಿತು, ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net