

ವಿಜಯಪುರ: ಮನೆಯ ಕಸ ಹೊರ ಹಾಕಿದಂತೆ, ನಮ್ಮ ಜೀವನ ಹಾಗೂ ಮನದೊಳಗಿನ ಆಲಸ್ಯ ಎಂಬ ಕಸವನ್ನು ತೆಗೆದು ಹಾಕಬೇಕು ಎಂದು ಶಿಕ್ಷಣ ತಜ್ಞ ಡಾ.ಗುರುರಾಜ್ ಕರಜಗಿ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಬಿದರಿ ಚೈಲ್ಡ್ ಅಕಾಡೆಮಿ ವತಿಯಿಂದ ಶುಕ್ರವಾರ ಪಾಲಕರಿಗೆ ಹಮ್ಮಿಕೊಂಡಿದ್ದ ಮಾರ್ಗದರ್ಶನ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.
ಸಮಯ ತುಂಬಾ ಅಮೂಲ್ಯ. ಕಳೆದು ಹೋದ ಹಣ ಮರಳಬಹುದು. ಆದರೆ, ಸಮಯ ಎಂದಿಗೂ ಮರಳಿ ಬಾರದು. ಅವಕಾಶ ಬಂದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮೌಲ್ಯಗಳನ್ನು ಹೇಳಿ ಕಲಿಸಲು ಸಾಧ್ಯವಿಲ್ಲ, ನಿಮ್ಮ ನಡೆಯೇ ಮೌಲ್ಯಗಳನ್ನು ನಿರೂಪಿಸುತ್ತದೆ ಎಂದು ಪಾಲಕರಿಗೆ ಕಿವಿ ಮಾತು ಹೇಳಿದರು.
ನಮ್ಮ ಮಗ ಬಹಳ ಟಿವಿ ನೋಡುತ್ತಾನೆ ಎಂದು ಕೆಲವರು ಹೇಳುತ್ತಾರೆ. ಅದನ್ನು ಕಲಿಸಿದವರು ಯಾರು ? ಎಂದರು. ಮಕ್ಕಳಿಗಾಗಿ ಪಾಲಕರು ತ್ಯಾಗ ಮಾಡುತ್ತಾರೆ, ಈಗ ಪಾಲಕರು ಮೊದಲು ಸಿರಿಯಲ್ ತ್ಯಾಗ ಮಾಡಬೇಕಿದ್ದು, ನಿನ್ನ ಪಾಡಿಗೆ ನೀನು ಬಾಗಿಲು ಹಾಕಿ ಓದು, ನಾನು ಸಿರಿಯಲ್ ನೋಡಬೇಕು ಎಂದು ಪಾಲಕರು ಹೇಳುವಾಗ ಮಗು ಹೇಗೆ ಓದಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಕುಟುಂಬ ಸಮಯ ಎನ್ನುವುದು ಪರಿಪಕ್ವವಾಗಿರಲಿ, ಒಟ್ಟಿಗೆ ಕುಳಿತು ಊಟ ಮಾಡಿ, ಒಟ್ಟಿಗೆ ಕುಳಿತು ಕ್ರೈಂ ಸ್ಟೋರಿ ನೋಡುವ ಬದಲು ಪ್ರಾರ್ಥನೆ ಮಾಡಿ ಎಂದು ತಿಳಿಸಿದರು.
ನಮ್ಮ ಬದುಕು ಜೇನಿನಂತೆ ಇರಬೇಕು. ಜೇನು ಹೂವಿನ ಬಳಿಯೇ ಹೋಗುತ್ತದೆ ಹೊರತು ಕೊಳಕಿನ ಬಳಿ ಹೋಗುವುದಿಲ್ಲ. ಆದರೆ ನೊಣ ಹೂವಿನ ಬಳಿ ಹೋಗುವುದಿಲ್ಲ ಬರೀ ಕೊಳಕಿನ ಬಳಿ ಹೋಗುತ್ತದೆ. ಹೀಗಾಗಿ, ನಾವು ಜೇನಿನಂತೆ ಸೌಂದರ್ಯದ ಬಳಿ ಹೋಗಬೇಕು. ನಂತರ ಗುರುಗಳಿಗೂ ಸಲಹೆ ನೀಡಿದ ಅವರು, ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಕಲಿಸಿದರೆ ಅರ್ಥವಾಗದ ವಿಷಯಗಳೂ ಸಹ ಅರ್ಥವಾಗುತ್ತವೆ. ಕೌಶಲ್ಯ ಹಾಗೂ ಜ್ಞಾನ ಶಿಕ್ಷಕರಿಗೆ ಅತ್ಯಂತ ಮಹತ್ವ ಎಂದರು.
ಖ್ಯಾತ ವೈದ್ಯ ಡಾ. ರವಿಕುಮಾರ್ ಮಾತನಾಡಿ, ಮೊಬೈಲ್ ಕಾರಣದಿಂದ ಮಕ್ಕಳಿಗೆ ನಿದ್ರಾಹೀನತೆ ಕಾರಣವಾಗುತ್ತಿದೆ. ಈ ಹಿಂದೆ ಮಕ್ಕಳಲ್ಲಿ ಇಂತಹ ಸಮಸ್ಯೆಯೇ ಇರಲಿಲ್ಲ. ಆದರೆ, ಇಂದು ಇದೇ ಪ್ರಧಾನವಾಗಿದೆ, ರಾತ್ರಿ ಸಮಯದಲ್ಲಿ ಮೊಬೈಲ್ ಬಳಕೆ ನಮ್ಮ ನಿದ್ದೆ ದೂರ ಮಾಡುತ್ತದೆ ಎಂದರು.
ಡಾ. ಬಿದರಿ ಚೈಲ್ಡ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ. ಎಲ್.ಎಚ್. ಬಿದರಿ, ಚೈಲ್ಡ್ ಅಕಾಡೆಮಿಯ ಸದಸ್ಯೆ ಶೋಭಾ ಬಿದರಿ, ಪ್ರೊ. ರಾಜು ಬಿದರಿ, ಪ್ರಕಾಶ ಮಠ, ದೀಪಾ ತಟ್ಟಿಮನಿ, ಮೋಹನ ಕಟ್ಟಿಮನಿ ಮತ್ತಿತರರಿದ್ದರು.
ಅದೇ ದಿನ ಸಂಜೆ ನವ್ಹೆಂಬರ್ ತಿಂಗಳಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಇಂದಿನ ಮಕ್ಕಳಿಗೆ ಮಾನಸಿಕ ಶಿಕ್ಷಣದ ಜೊತೆಗೆ ಶಾರೀರಿಕ ಶಿಕ್ಷಣ ಅತೀ ಅವಶ್ಯವಿದೆ. ಮಕ್ಕಳಲ್ಲಿ ಬರೀ ಶಿಕ್ಷಣಕ್ಕೆ ಒತ್ತು ಕೊಡದೆ ಅವರ ಸವಾರ್ಂಗೀಣ ಅಭಿವೃದ್ಧಿಗೆ ಶಾರೀರಿಕ ಆಟಗಳ ತರಬೇತಿ ಕೂಡ ಅಗತ್ಯವಿದೆ ಎಂದರು.
ಮುಖ್ಯ ಅತಿಥಿ ನಾಗಠಾಣ ಕ್ಷೇತ್ರದ ಶಾಸಕ ವಿಠಲ ಕಟಕದೊಂಡ ಮಾತನಾಡಿ, ಮಕ್ಕಳ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ ಡಾ. ಬಿದರಿಯವರು ಸಾಮಾಜಿಕ ಕ್ಷೇತ್ರದಲ್ಲಿಯೂ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದರು.
ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಪ್ರಾಸ್ತವಾವಿಕವಾಗಿ ಮಾತನಾಡಿದರು. ನಂತರ ವಿಜೇತರಿಗೆ ನಗದು ಬಹುಮಾನ ಜತೆಗೆ ಪಾರಿತೋಷ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಪ್ರತಿಭೆ ದಿಯಾ ಹೆಗಡೆ ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಹಾಡಿ ಎಲ್ಲರನ್ನೂ ರಂಜಿಸಿದರು.