ಪೂರ್ಣವಾಗದ ಕಸ ವಿಲೇವಾರಿ ಘಟಕ

5adarshkdga1
Published on

ಆದರ್ಶ್ ಅದ್ಕಲೇಗಾರ್ ಮಡಿಕೇರಿ
ನಗರದ ಕಸ ವಿಲೇವಾರಿಗೆ ೧೦ ಎಕರೆ ಜಾಗ ಗುರುತು ಮಾಡಿದ್ದರೂ ಕಸವಿಲೇವಾರಿ ಘಟಕ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಡಳಿತ, ನಗರಸಭೆ ಮೀನಾಮೇಷ ಎಣಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿದ್ದು, ಘನತ್ಯಾಜ್ಯಗಳು ಹೆಚ್ಚುತ್ತಿದೆ. ಇದರಿಂದ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಇದನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕಿದೆ. ಪ್ರಸ್ತುತ ನಗರದ ಸ್ಟೋನ್‌ಹಿಲ್‌ನಲ್ಲಿ ಸುರಿಯಲಾಗುತ್ತಿರುವ ಕಸದಿಂದ ಸಾಂಕ್ರಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ನಗರದ ಹೊರವಲಯ ೨ನೇ ಮೊಣ್ಣಂಗೇರಿಯ ಸರ್ವೆ ನಂ೨೦/೧ ರಲ್ಲಿ ೧೦ ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ೧೦ ಎಕರೆ ಪ್ರದೇಶದಲ್ಲಿ ರೂ.೬.೮೪ ಕೋಟಿ ವೆಚ್ಚದಲ್ಲಿ ೬೫ ಟಿಪಿಡಿ ಸಾಮರ್ಥ್ಯದ ಘನತ್ಯಾಜ್ಯ ಸಂಸ್ಕರಣ ಮತ್ತು ವಿಲೇವಾರಿ ಘಟಕವನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ.


ಪ್ರಸ್ತುತ ನಗರದ ೨೩ ವಾರ್ಡ್‌ಗಳಿಂದ ಕಸವನ್ನು ಸ್ಟೋನ್ ಹಿಲ್ ಬಳಿಯ ಬೆಟ್ಟವೊಂದರ ಮೇಲೆ ಸುರಿಯಲಾಗುತ್ತಿದೆ. ಮಳೆಗಾಲದಲ್ಲಿ ಕೊಳಚೆ ನೀರು ಆವರಿಸಿಕೊಂಡು ಕೆಟ್ಟ ವಾಸನೆ ಬರುತ್ತದೆ. ಕಸ ತುಂಬಿ ಸೊಳ್ಳೆ-ನೊಣಗಳ ಹಾವಳಿಯಿಂದ ಸಾಂಕ್ರಾಮಿಕ ರೋಗದ ಆತಂಕವಿದೆ. ಇಷ್ಟೆಲ್ಲಾ ಸಮಸ್ಯೆಗಳ ಅರಿವಿರುವ ಜನಪ್ರತಿನಿಧಿಗಳು ಯೋಜನೆಗೆ ವರ್ಷ ಕಳೆಯುತ್ತಿದ್ದರೂ ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆ ಕಾಮಗಾರಿ ವಿಳಂಬ ಕುರಿತು ಸಾರ್ವಜನಿಕರು, ನಗರ ನಿವಾಸಿಗಳು, ವಿವಿಧ ಸಂಘಟನೆಯ ಪ್ರಮುಖರು, ಅಧಿಕಾರಿಗಳ ಅಭಿಪ್ರಾಯ ಲೌಡ್‌ಸ್ಪೀಕರ್‌ನಲ್ಲಿ ಅನಾವರಣಗೊಂಡಿದೆ.

ಕೊಡಗು ರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರಸಭೆ ಮುಂದೆ ಅಹೋರಾತ್ರಿ ಧರಣಿ ನಡೆಸಿ ಅವೈಜ್ಞಾನಿಕ ಕಸ ವಿಲೇವಾರಿ ಘಟಕವನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಲಾಗಿತ್ತು. ಆದರೆ, ಜಾಗ ಗುರುತ್ತಾಗಿದ್ದರೂ ಇನ್ನು ಪೂರ್ಣಗೊಂಡಿಲ್ಲ. ಜಿಲ್ಲಾಧಿಕಾರಿಗಳು ತಕ್ಷಣ ಅರಣ್ಯ, ಕಂದಾಯ ಮತ್ತು ನಗರಸಭೆಯ ಅಧಿಕಾರಿಗಳೊಂದಿಗೆ ಸಭೆ ಕರೆದು ಅವೈಜ್ಞಾನಿಕ ಕಸ ವಿಲೇವಾರಿ ಘಟಕವನ್ನು ಸ್ಥಳಾಂತರಿಸಬೇಕು.
-ಪವನ್ ಪೆಮ್ಮಯ್ಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ

ಸರ್ಕಾರ ಕಸವಿಲೇವಾರಿ ವಿಚಾರದಲ್ಲಿ ಜವಾಬ್ದಾರಿ ಹೊರಬೇಕಿತ್ತು. ನಗರಸಭೆಯ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಸುಬ್ರಮಣ್ಯನಗರ ಮತ್ತು ಸುತ್ತ ಮುತ್ತಲಿನ ಸಾರ್ವಜನಿಕರು ಕೋರ್ಟ್ ಮೊರೆ ಹೋಗುವ ಪ್ರಸಂಗ ಎದುರಾಗಿದೆ. ಸಮಸ್ಯೆಗಳಿಗೆ ಸಾರ್ವಜನಿಕರೇ ಪರಿಹಾರ ಪಡೆಯುದಾದರೇ ಸರ್ಕಾರ ಮತ್ತು ಜನಪ್ರತಿನಿಧಿಗಳು ಯಾಕೆ?.
-ತೆನ್ನಿರ ಮೈನಾ, ಜಿಲ್ಲಾಧ್ಯಕ್ಷರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ

ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ. ಜತೆಗೆ ಅನುಧಾನ ತರುವುದರಲ್ಲಿ ವಿಫಲ. ನಾವು ಏನೇ ಮಾಡಿದರು ಜನ ನಮ್ಮನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ಮನಸ್ಥಿತಿ. ಇವೆಲ್ಲವು ಈಗಿನ ಎಲ್ಲಾ ಕೆಲಸಗಳಿಗೆ ವಿಳಂಬವಾಗುತ್ತಿದೆ.
-ಲೀಲಾಶೇಷಮ್ಮ, ಮಾಜಿ ಉಪಾಧ್ಯಕ್ಷೆ, ಮಡಿಕೇರಿ ನಗರಸಭೆ

ಈಗಾಗಲೇ ಜಾಗ ಗುರುತು ಮಾಡಲಾಗಿದೆ. ಆದರೆ, ಮಡಿಕೇರಿ ನಗರಸಭೆಯ ಆಡಳಿತ ಮಂಡಳಿಗೆ ಇದರ ಬಗ್ಗೆ ಯಾವುದೇ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ನಗರಸಭೆ ಆಡಳಿತ ಮಂಡಳಿ ಕಾಲಹರಣ ಮಾಡುವುದು ಬಿಟ್ಟು, ಕಸವಿಲೇವಾರಿಗೆ ಗುರುತು ಮಾಡಿರುವ ಜಾಗದಲ್ಲಿ ಕಸ ವಿಲೇವಾರಿ ಮಾಡುವಂತಾಗಬೇಕು.
-ರವಿಗೌಡ, ಸಾರ್ವಜನಿಕರು

ಮಡಿಕೇರಿಯಲ್ಲಿ ಕಳೆದ ಬಹಳಷ್ಟು ವರ್ಷಗಳಿಂದ ತ್ಯಾಜ್ಯ ವಿಲೇವಾರಿಯ ಸಮಸ್ಯೆ ಇದೆ. ಸುಬ್ರಮಣ್ಯ ನಗರದ ಮೇಲ್ಭಾಗದಲ್ಲಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ತ್ಯಾಜ್ಯ ವಿಂಗಡನೆಗೆಂದು ಯಂತ್ರೋಪಕರಣಗಳಿದ್ದರೂ ಕೂಡ ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ. ತ್ಯಾಜ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸುಬ್ರಮಣ್ಯನಗರ ಹಾಗು ರೈಫಲ್ ರೇಂಜ್ ಸುತ್ತಮುತ್ತ ವಾಸಿಸುವವರಿಗೆ ಸಾಂಕ್ರಾಮಿಕ ಕಾಯಿಲೆಯ ಭಯ ಉದ್ಭವಿಸಿದೆ. ಶಾಸಕರು ಹಾಗು ಸಚಿವರು ಇತ್ತ ಗಮನಹರಿಸಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಪರಿಹಾರ ನೀಡಬೇಕಿದೆ.
-ಚಂದನ್ ನಂದರಬೆಟ್ಟು, ನಗರ ನಿವಾಸಿ

ಮಡಿಕೇರಿ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಹಲವಾರು ವರ್ಷಗಳಿಂದ ಇರುವುದು ಆಡಳಿತದ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ಜಿಲ್ಲಾಡಳಿತ, ನಗರಸಭೆ ಮತ್ತು ಸಂಬಂಧಿಸಿದ ಜನಪ್ರತಿನಿಧಿಗಳು ಸಾಧ್ಯವಾದಷ್ಟು ಬೇಗ ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿದು ಜನತೆಗೆ ಮುಕ್ತಿ ನೀಡಬೇಕು. ಕಸ ವಿಲೇವಾರಿ ಘಟಕ ನಿರ್ಮಾಣದಿಂದ ಪರಿಸರಕ್ಕೆ ಭವಿಷ್ಯದಲ್ಲಿ ಉಂಟಾಗುವ ಹಾನಿಯನ್ನು ತಡೆಯಬಹುದು.
-ದೀಪಕ್ ಪೊನ್ನಪ್ಪ, ಸಾರ್ವಜನಿಕರು

ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಬೇಕು. ಆದರೆ, ಅದರ ಶಕ್ತಿ ತಿಳಿಯದ ಅಧಿಕಾರಿಗಳು ಅವೈಜ್ಞಾನಿಕವಾಗಿ ಬೆಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ. ಇಂದು ಎಲ್ಲ ರೀತಿಯ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಆದಷ್ಟು ಶೀಘ್ರವಾಗಿ ಜಾಗ ಗುರುತು ಮಾಡಿರುವ ೨ನೇ ಮೊಣ್ಣಂಗೇರಿ ಪ್ರದೇಶದಲ್ಲಿ ವಿಲೇವಾರಿ ಘಟಕವನ್ನು ವೈಜ್ಞಾನಿಕವಾಗಿ ಮಾಡಿ ಪೂರ್ಣಗೊಳಿಸಿ, ಕಸದಿಂದ ಮುಕ್ತಿಗೊಳಿಸಬೇಕು.
-ಹರೀಶ್ ಆಚರ್ಯ, ಗೌಳಿಬೀದಿ ನಿವಾಸಿ

೨ನೇ ಮೊಣ್ಣಂಗೇರಿಯಲ್ಲಿ ಕಸವಿಲೇವಾರಿ ಘಟಕದ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ, ಚರಂಡಿ ಕೆಲಸಗಳು ಆಗುತ್ತಿದೆ. ನಗರಸಭೆಯಲ್ಲಿರುವ ಹಣದಲ್ಲಿ ಕೆಲಸ ಮಾಡಲಾಗುತ್ತಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು.
-ಅನಿತಾ ಪೂವಯ್ಯ, ಅಧ್ಯಕ್ಷರು, ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net