ಪೂರ್ಣಗೊಳ್ಳದ ಭಾಗಮಂಡಲ ಫ್ಲೈಓವರ್

12adarshkdga4
Published on

ಆದರ್ಶ್ ಅದ್ಕಲೇಗಾರ್ ಮಡಿಕೇರಿ


ಕೊಡಗಿನ ಮೊದಲ ಫ್ಲೈ ಓವರ್ ಹೆಗ್ಗಳಿಕೆಯ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ೪ ವರ್ಷಗಳೆದರೂ ಪೂರ್ಣಗೊಳ್ಳದೇ ಆಮೇಗತಿಯಲ್ಲಿ ಸಾಗುತ್ತಿದೆ.


ಸಿದ್ದರಾಮಯ್ಯ ನೇತತ್ವದ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಮೇಲ್ಸೇತುವೆ ಯೋಜನೆ ಪ್ರಸ್ತಾಪಕ್ಕೆ ಜೀವ ಸಿಕ್ಕಿತ್ತು. ಕಾವೇರಿ ನೀರಾವರಿ ನಿಗಮದ ವತಿಯಿಂದ ೨೯.೬೨ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಈ ಕಾಮಗಾರಿ ೨೦೧೮ರ ವರ್ಷಾಂತ್ಯಕ್ಕೆ ಆರಂಭವಾಯಿತು. ಕೆಲಸ ಆರಂಭವಾದ ಒಂದು ವರ್ಷದಲ್ಲಿ ಮೇಲ್ಸೇತುವೆ ಸಂಚಾರಕ್ಕೆ ಲಭ್ಯವಾಗಬೇಕಿತ್ತು. ಆದರೆ ಈವರೆಗೂ ಕಾಮಗಾರಿ ಮುಗಿದಿಲ್ಲ.


ಅನುದಾನ ಮತ್ತು ವೆಚ್ಚ: ೨೦೧೭-೧೯ ರಲ್ಲಿ ೫ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ವೆಚ್ಚ ನಡೆದಿರಲಿಲ್ಲ. ೨೦೧೮-೧೯ ಸಾಲಿನಲ್ಲಿ ೩ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು ೧.೫೨ ಕೋಟಿ ರೂ. ವೆಚ್ಚ ಮಾಡಲಾಗಿದೆ. ೨೦೧೯-೨೦ರಲ್ಲಿ ೩ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು ೪.೧೪ ಕೋಟಿ ರೂ. ವೆಚ್ಚ ಮಾಡಲಾಗಿದೆ. ೨೦೨೦-೨೧ ೧ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ೪.೫೩ ಕೋಟಿ ರೂ. ವೆಚ್ಚ ಮಾಡಲಾಗಿದೆ.


ಮಳೆಗಾಲದಲ್ಲಿ ವಾರಗಳ ಕಾಲ ದ್ವೀಪವಾಗಿ ಪರಿವರ್ತನೆ ಆಗುವ ಭಾಗಮಂಡಲಕ್ಕೆ ಹೊಸದೊಂದು ಸಮಸ್ಯೆ ಜತೆಯಾಗುತ್ತದೆ. ಮೇಲ್ಸೇತುವೆ ಕಾಮಗಾರಿಯಿಂದಾಗಿ ರಸ್ತೆಯೆಲ್ಲಾ ಕೆಸರುಮಯವಾಗುತ್ತದೆ. ವಾಹನ ಸಂಚಾರವಿರಲಿ ನಡೆದಾಡಲು ಕೂಡ ಜನಸಾಮಾನ್ಯರು ಕಷ್ಟಪಡುವಂತಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಮನಗಂಡಿದ್ದರೂ ಒಂದಿಲ್ಲೊಂದು ಕಾರಣಕ್ಕೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಈ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಲೌಡ್‌ಸ್ಪೀಕರ್‌ನಲ್ಲಿ ಅನಾವರಣಗೊಂಡಿದೆ.

ಕಾಮಗಾರಿ ಈ ವರ್ಷವೂ ಕೆಲಸ ಪೂರ್ಣಗೊಳ್ಳುವುದು ಅನುಮಾನ. ಕಾಮಗಾರಿಯಿಂದ ಪಾರ್ಕಿಂಗ್ ಸಮಸ್ಯೆ ಕೂಡ ಎದುರಾಗಿದೆ. ಕಾಮಗಾರಿ ಮುಗಿಯದಿದ್ದಲ್ಲಿ ಇಲ್ಲಿನ ನಿವಾಸಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ. ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು.
-ಚಲನ್, ಭಾಗಮಂಡಲ ನಿವಾಸಿ

ಲೈಟ್ ಪೋಲ್ಸ್, ನಾಲ್ಕು ಸ್ಲ್ಯಾಬ್ ಅಳವಡಿಕೆ ಬಾಕಿಯಿದೆ. ಮುಂದಿನ ೩-೪ ತಿಂಗಳ ಒಳಗೆ ನಮ್ಮ ಮೇಲ್ಸೇತ್ತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ರ‌್ಯಾಂಪ್ ಕೆಲಸಕ್ಕೆ ಬೇರೆ ಡೆಂಟರ್ ಕರೆಯಲಾಗಿದೆ. ಅವರು ಯಾವಾಗ ಆರಂಭ ಮಾಡುತ್ತಾರೆ ಎಂಬ ಮಾಹಿತಿಯಿಲ್ಲ.
-ಹರಿನಾರಾಯಣ್, ವ್ಯವಸ್ಥಾಪಕರು, ಮೇಲ್ಸೇತುವೆ ಯೋಜನೆ

ಜನಪತ್ರಿನಿಧಿಗಳ ಇಚ್ಛಾಶಕ್ತಿ ಕೊರತೆ ಮತ್ತು ಸರ್ಕಾರದ ನಿರ್ಲಕ್ಷ್ಯ ಕಾರಣವಾಗಿದೆ. ಕಾಂಗ್ರೆಸ್‌ನ ಎಂ.ಬಿ.ಪಾಟೀಲ್, ಕೆ.ಜಿ.ಜಾರ್ಜ್‌ರವರು ಕಾಮಗಾರಿ ಆರಂಭಕ್ಕೆ ಕಾರಣವಾದ ಹಿನ್ನೆಲೆ ವಿರೋಧ ಪಕ್ಷದ ಸಾಧನೆ ಬಿಂಭಿತವಾಗಬಹುದು ಎಂಬ ಭಯಕಾಡುತ್ತಿದೆ. ಜತೆಗೆ ಕಾಂಗ್ರೆಸ್‌ನ ಕೊಡುಗೆಯಾಗುತ್ತದೆ ಎಂಬ ಏಕೈಕ ಕಾರಣಕ್ಕಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ತೆನ್ನೀರ ಮೈನಾ, ಜಿಲ್ಲಾಧ್ಯಕ್ಷರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ

ಭಾಗಮಂಡಲದ ಮೇಲ್ಸೇತುವೆಯ ಕಾಮಗಾರಿ ಈಗಾಗಲೇ ಮುಗಿಯಬೇಕಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳದೆ ಕಾಮಗಾರಿ ನೆನೆಗುದ್ದಿಗೆ ಬಿದ್ದಿದೆ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಸಿಗುವಂತಾಗಬೇಕು.
ರವಿಗೌಡ, ಅಧ್ಯಕ್ಷರು, ಕರ್ನಾಟಕ ರಕ್ಷಣ ವೇದಿಕೆ

ಕಾಮಗಾರಿ ನೆನಗುದಿಗೆ ಬಿದ್ದಿರುವುದು ದುರಂತ. ಕೊಡಗಿಗೆ ಬರುವ ಪ್ರವಾಸಿಗರು ತಲಕಾವೇರಿ ಹಾಗೂ ಭಾಗಮಂಡಲ ಪುಣ್ಯ ಕ್ಷೇತ್ರದ ದರ್ಶನ ಮಾಡದೇ ಹಿಂತಿರುಗುವುದಿಲ್ಲ. ಆದರೆ, ಭಾಗಮಂಡಲ ಕ್ಷೇತ್ರದಲ್ಲಿ ನಿರ್ಮಿಸಿರುವ ಮೇಲ್ಸೇತುವೆ ೪ ವರ್ಷವಾದರೂ ಪೂರ್ಣಗೊಂಡಿಲ್ಲ. ಸಂಬಂಧಪಟ್ಟವರು ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಬೇಕು.
ಎಸ್.ಸಿ.ಶರತ್ ಶೇಖರ್, ಸದಸ್ಯರು, ಶನಿವಾರಸಂತೆ ಗ್ರಾಮಪಂಚಾಯಿತಿ

ಭಾಗಮಂಡಲ ಕೊಡಗಿನ ಪವಿತ್ರ ಕ್ಷೇತ್ರಗಳಲ್ಲಿ ಒಂದು. ಮಳೆಗಾಲದಲ್ಲಿ ಇಲ್ಲಿನ ತ್ರಿವೇಣಿ ಸಂಗಮ ಭರ್ತಿಯಾಗಿ ರಸ್ತೆ ಸಂಪರ್ಕ ಖಡಿತಗೊಳ್ಳುವುದರಿಂದ ಕಳೆದ ಬಹಳಷ್ಟು ವರ್ಷಗಳಿಂದ ಮೇಲ್ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಈ ಕಾಮಗಾರಿ ಆಮೆಗತಿಯಲ್ಲಿ ನಡೆಸುತ್ತಿರುವುದು ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗಿ ಪರಿಣಮಿಸಿದೆ. ಶೀಘ್ರವಾಗಿ ಕಾಮಗಾರಿ ಮುಗಿಸಿ ಸ್ಥಳೀಯ ನಿವಾಸಿಗಳಿಗೆ ಉಂಟಾಗಿರುವ ಶಬ್ದ ಮಾಲಿನ್ಯದ ಕಿರಿಕಿರಿಯನ್ನು ನಿವಾರಿಸಬೇಕಿದೆ.
-ಚರಣ್ ಬಲ್ಯದ, ಸಾರ್ವಜನಿಕರು, ಮಡಿಕೇರಿ ನಿವಾಸಿ

ಭಾಗಮಂಡಲಕ್ಕೆ ಮೇಲ್ ಸೇತುವೆ ಅತ್ಯಗತ್ಯವಾಗಿತ್ತು. ಆದರೆ, ಕಾಮಗಾರಿ ಆರಂಭಿಸಿ ಆಮೆಗತಿಯಲ್ಲಿ ಸಾಗುತ್ತಿರುವುದು ದುರಂತ. ಸೇತುವೆ ಕೆಲಸ ಮುಗಿಯುವ ಮುನ್ನವೆ ಕೆಲವು ಭಾಗಗಳಲ್ಲಿ ಮುರಿದು ಬೀಳುತ್ತಿದೆ.
ಜೆ.ಎಲ್.ಜನಾರ್ಧನ್, ಸಾರ್ವಜನಿಕರು, ಕೊಡ್ಲಿಪೇಟೆ ನಿವಾಸಿ

ಅನುಧಾನವನ್ನು ಬಾಯಿಬಿಟ್ಟು ಕೇಳಲಾಗದ ಸ್ಥಿತಿಯಲ್ಲಿ ನಮ್ಮ ಜನಪ್ರತಿನಿಧಿಗಳಿದ್ದಾರೆ. ಮಂತ್ರಿ ಮಾಡದಿದ್ದರೂ ಪರವಾಗಿಲ್ಲ. ಅನುದಾನ ಕೇಳಿ ತರಲಾಗದ ನಿರಾಸಕ್ತಿ ನಮ್ಮ ಶಾಸಕರದ್ದಾಗಿದೆ. ಕಾಂಗ್ರೆಸ್ ಸರ್ಕಾರ ಆರಂಭಿಸಿದ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿರುವುದಕ್ಕೆ ಕೈಗನ್ನಡಿಯಾಗಿ ನಮ್ಮ ಇಬ್ಬರು ಶಾಸಕರುಗಳಿಗೆ ಜಿಲ್ಲೆಯ ಬಗ್ಗೆಗಿನ ಕಾಳಜಿ. ಜಿಲ್ಲೆಯ ಜನರಿಗೆ ತುಂಬಾ ಬೇಸರವಿದೆ.
ಕೆ.ಪಿ.ಚಂದ್ರಕಲಾ, ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net