

ಚಿಕ್ಕಬಳ್ಳಾಪುರ: ನನಗೆ ಹೇಳಿದ್ದೇನು, ನೀನು ಮಾಡಿದ್ದೇನು, ನಿಮ್ಮಪ್ಪನ ಮನೆಯಿಂದ ಲೋಡ್ ಆಗುತ್ತಾ ಇದೆಯಾ?. ನಿನ್ನಂತಹ ನಾಲಾಯಕ್ ಅಧಿಕಾರಿಯನ್ನು ನಾನು ನೋಡಿಲ್ಲ.
ಹೀಗೆ ರಾಜ್ಯ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಏಕವಚನದಲ್ಲಿ ಬಹಿರಂಗವಾಗಿ ಕಾರ್ಯಕ್ರಮದಲ್ಲಿ ತರಾಟೆಗೆ ತೆಗೆದುಕೊಂಡಿದ್ದು ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ವೇದಿಕೆಯಲ್ಲಿ ಸಚಿವರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ಬೈಗುಳ ತಿಂದವರು.
ಚಿಂತಾಮಣಿ ನಗರದಲ್ಲಿ ಬರೋಬ್ಬರಿ 200 ಅಂಗವಿಕಲರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಕೇವಲ ೮೪ ದ್ವಿಚಕ್ರ ವಾಹನಗಳು ಮಾತ್ರ ತರಲಾಗಿತ್ತು. ಇದಕ್ಕೆ ಸಚಿವರು ಬೇಸರಗೊಂಡರು.
ಮೇ.೧೦ ರಂದು ಎಲ್ಲ ವಾಹನಗಳನ್ನು ತರಿಸಲಾಗಿದೆ ಎಂದು ತಿಳಿಸಿದವರು, ಈಗ ಲೋಡ್ ಆಗ್ತಾ ಇದೆ ಎನ್ನುತ್ತಿದ್ದಂತೆ ಕಿಡಿಕಾರಿದರು. ನಿಮ್ಮಪ್ಪನ ಮನೆಯಿಂದ ಲೋಡ್ ಆಗ್ತಾ ಇದ್ಯಾ ಎಂದರು. ಹಾಗೆಯೇ ಇಂತಹ ನಾಲಾಯಕ್ ಅಧಿಕಾರಿಯನ್ನು ನಾನು ಎಂದು ನೋಡಿಲ್ಲ, ನನಗೆ ಬಹಳ ಬೇಸರವಾಗುತ್ತಿದೆ. ಅಂಗವಿಕಲರನ್ನು ಇಲ್ಲಿಗೆ ಕರೆಸಿ, ಈ ರೀತಿ ಮಾಡಿರುವುದು ಸರಿಯಲ್ಲ. ಇದು ನನ್ನ ಹಲವು ದಿನಗಳ ಕನಸಿನ ಕಾರ್ಯಕ್ರಮ. ಒಬ್ಬ ಅಧಿಕಾರಿಯ ನಿರ್ಲಕ್ಷ್ಯದಿಂದ ಕಾರ್ಯಕ್ರಮವು ಸಹ ಹಾಳಾಗಿ ಹೋಯಿತು. ದಯವಿಟ್ಟು ಎಲ್ಲರೂ ನನ್ನ ಕ್ಷಮಿಸಿ ಎಂದರು.