ಆದಾಯ ತೆರಿಗೆ ಮತ್ತು ತೆರಿಗೆ ಕ್ಲಿನಿಕ್ ಕಾರ್ಯಾಗಾರ

2
Published on

ಮೈಸೂರು: ಕಾಲ, ಕಾಲಕ್ಕೆ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ತೆರಿಗೆ ಸಲಹೆಗಾರರು ಆದಾಯ ತೆರಿಗೆ ಇಲಾಖೆ ಹಾಗೂ ತೆರಿಗೆ ಪಾವತಿದಾರರ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕು ಎಂದು ಆದಾಯ ತೆರಿಗೆ ಇಲಾಖೆಯ ಮೈಸೂರು ವಲಯ ಜಂಟಿ ಆಯುಕ್ತೆ ಕಲ್ಪಲತಾ ರಾಜನ್ ಸಲಹೆ ನೀಡಿದರು.
ಆದಾಯ ತೆರಿಗೆ ಇಲಾಖೆ, ಮೈಸೂರು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ, ಭಾರತೀಯ ತೆರಿಗೆ ಸಲಹೆಗಾರರ ಸಂಸ್ಥೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಆದಾಯ ತೆರಿಗೆ ಮತ್ತು ತೆರಿಗೆ ಕ್ಲಿನಿಕ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆದಾಯ ತೆರಿಗೆಯ ಬಹುಪಾಲು ಸೇವೆ ಡಿಜಿಟಲ್ ರೂಪದಲ್ಲೇ ನಡೆಯುತ್ತಿದೆ. ತೆರಿಗೆದಾರರಿಗೆ ಇ-ಮೇಲ್ ಮೂಲಕ ಮಾಹಿತಿ ಕಳುಹಿಸಲಾಗುತ್ತಿದೆ. ಆದರೆ ಸಾಕಷ್ಟು ಜನ ಅದನ್ನು ತೆರೆದು ನೋಡಿರುವುದೇ ಇಲ್ಲ ಎಂದರು. ಇಂತಹ ಸಂದರ್ಭಗಳಲ್ಲಿ ಸಂವಹನದ ಕೊರತೆ ಉಂಟಾಗುತ್ತಿದೆ. ಆದ್ದರಿಂದ ತೆರಿಗೆ ಸಲಹೆಗಾರರು ಸಕಾಲಕ್ಕೆ ತಾವೂ ಮಾಹಿತಿ ಪಡೆದು, ಅದನ್ನು ತಮ್ಮ ಗ್ರಾಹಕರಿಗೆ ಅಗತ್ಯ ಸಲಹೆ ನೀಡಬೇಕು ಎಂದು ಹೇಳಿದರು.
ಡಿಜಿಟಲ್ ತಂತ್ರಜ್ಞಾನ ಹೆಚ್ಚಾಗಿ ಬಳಕೆಯಾಗಲು ಆರಂಭಗೊಂಡಾಗಿನಿಂದ ಆದಾಯ ತೆರಿಗೆ ಇಲಾಖೆ ಹಾಗೂ ತೆರಿಗೆ ಕಟ್ಟುವವರ ನಡುವೆ ನೇರ ಮಾತಕತೆ ಕಡಿಮೆ ಎನ್ನುವಷ್ಟರ ಮಟ್ಟಿಗೆ ಆಗಿದೆ. ಆದ್ದರಿಂದ ತೆರಿಗೆ ಸಲಹೆದಾರರು ಈ ಇಬ್ಬರ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮನವರಿಕೆ ಮಾಡಿಕೊಡಿ:
ತೆರಿಗೆಯ ವಿವಿಧ ಪದ್ಧತಿ ಕುರಿತು ಮಾಹಿತಿ ನೀಡಿದ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತ ಎಂ.ಎಚ್. ಹುಸೇನ್ ಮಾತನಾಡಿ, ಕೇಂದ್ರ ಅಥವಾ ರಾಜ್ಯ ಸರ್ಕಾರ ಇರಲಿ, ತೆರಿಗೆ ಸಂಗ್ರಹ ಬಹುಮುಖ್ಯ. ತೆರಿಗೆಯಿಂದಲೇ ದೇಶದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಒದಗಿಸಲು ಸಾಧ್ಯ. ಇದನ್ನು ಸಲಹೆಗಾರರು ತೆರಿಗೆ ಪಾವತಿದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕೇಳಿಕೊಂಡರು.
ದೇಶದಲ್ಲಿ 2014ರ ವರೆಗೆ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆಗೆ 8-10 ತಿಂಗಳು ಬೇಕಿತ್ತು. ಈಗ ಅದಕ್ಕೆ 48 ಗಂಟೆ ಸಾಕು. ನೇರ ಆದಾಯ ತೆರಿಗೆ ಪಾವತಿಯು 2014ರಲ್ಲಿ 6.63 ಲಕ್ಷ ಕೋಟಿ ರೂ.ಇದ್ದದ್ದು ಈಗ 19.58 ಲಕ್ಷ ಕೋಟಿ ರೂ.ಗೆ ಏರಿಕೆ ಆಗಿದೆ. ಕಳೆದೊಂದು ದಶಕದಲ್ಲಿ ಆದಾಯ ತೆರಿಗೆ ಪಾವತಿದಾರರ ಸಂಖ್ಯೆಯು 3.8 ಕೋಟಿಯಿಂದ 7.9 ಕೋಟಿಗೆ ಏರಿಕೆ ಆಗಿದೆ ಎಂದು ಅಂಕಿ-ಅಂಶ ನೀಡಿದರು.
ಮಾಹಿತಿ ಲಭ್ಯವಾಗಬೇಕು:
ಮೈಸೂರು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿ, ಕರ್ನಾಟಕ ರಾಜ್ಯವು ತೆರಿಗೆ ಪಾವತಿಯಲ್ಲಿ ದೇಶದ ಇತರೆ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದ್ದು, ಅದಕ್ಕೆ ತೆರಿಗೆ ಸಲಹೆಗಾರರು ಕಾರಣ. ಇಂತಹ ಅರಿವು ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಬೇಕು. ಸಣ್ಣ-ಪುಟ್ಟ ಪ್ರಮಾಣದಲ್ಲಿ ತೆರಿಗೆ ಪಾವತಿ ಮಾಡುವವರಿಗೂ ಮಾಹಿತಿ ಲಭ್ಯವಾಗಬೇಕು ಎಂದರು.
ಐಸಿಎಐ ಮೈಸೂರು ಘಟಕದ ಅಧ್ಯಕ್ಷ ಉತ್ತಮ್, ಕಾರ್ಯದರ್ಶಿ ಎಸ್. ಭಾರ್ಗವ, ಐಟಿಪಿಐ ಸಹ ಸಂಚಾಲಕ ವಸಂತ ಲದ್ವಾ, ಮೈಸೂರು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಕಾರ್ಯದರ್ಶಿ ಎ.ಕೆ. ಶಿವಾಜಿ ರಾವ್, ಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಉಪಾಧ್ಯಕ್ಷ ಎನ್. ಯಶವಂತ ರಾಜ್, ತೆರಿಗೆ ಸಲಹೆಗಾರರಾದ ಎಚ್. ರಾಮಚಂದ್ರ, ಶ್ರೀಧರ ಪಾರ್ಥಸಾರಥಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net