ಮುಜರಾಯಿ ದೇವಸ್ಥಾನದ ಆದಾಯ ಹೆಚ್ಚಳ: ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ

ramalinga-reddy-agencies
Published on

ಮಂಡ್ಯ: ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಆದಾಯ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2022-23 ನೇ ಸಾಲಿನಲ್ಲಿ ದೇವಸ್ಥಾನಗಳ ಹುಂಡಿಯಿಂದ 8.48 ಕೋಟಿ ರೂ, 2023-24 ನೇ ಸಾಲಿನಲ್ಲಿ 9.59 ಕೋಟಿ ರೂ ಹಾಗೂ 2024-25 ರಲ್ಲಿ 18.08 ಕೋಟಿ ರೂ.ಗೆ ಹೆಚ್ಚಳವಾಗಿದೆ ಎಂದು ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ದಿನೇಶ ಗೂಳಿಗೌಡ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಸ್ಥಾನವು ಅತಿ ಹೆಚ್ಚು ಆದಾಯ ಗಳಿಸಿದೆ. 2022-23 ಹಾಗೂ 2023-24 ನೇ ಸಾಲಿನಲ್ಲಿ 3.89 ಕೋಟಿ ರೂ ಆದಾಯ ಗಳಿಸಿಕೊಂಡಿದೆ. ಅಂತೆಯೇ ಶ್ರೀರಂಗಪಟ್ಟಣದ ಗಂಜಾಂ ನಿಮಿಷಾಂಬ ದೇವಾಲಯ 3.73 ಕೋಟಿ ರೂ, ಶ್ರೀರಂಗಪಟ್ಟಣ ರಂಗನಾಥಸ್ವಾಮಿ ದೇವಸ್ಥಾನದಲ್ಲಿ 2.60 ಕೋಟಿ ರೂ ಆದಾಯ ಬಂದಿದೆ. ಆರತಿ ಉಕ್ಕಡ ಗ್ರಾಮದ ಅಹಲ್ಯಾದೇವಿ ದೇವಸ್ಥಾನವು 2.54 ಕೋಟಿ ರೂ., ಮುತ್ತತ್ತಿ ಆಂಜನೇಯ ಸ್ವಾಮಿ ದೇವಸ್ಥಾನವು 1.01 ಕೋಟಿ ರೂ. ಆದಾಯ ಗಳಿಸಿದೆ ಎಂದು ವಿವರಿಸಿದ್ದಾರೆ.

ಇನ್ನು ಕಳೆದ ಎರಡು ವರ್ಷದಲ್ಲಿ ಜಿಲ್ಲೆಯ ಮುಜರಾಯಿ ದೇಗುಲಗಳ ಅಭಿವೃದ್ಧಿಗೆ ಸರ್ಕಾರ 4.33 ಕೋಟಿ ರೂ. ಗಳನ್ನು ಖರ್ಚು ಮಾಡಿದೆ. ಜಿಲ್ಲೆಯಲ್ಲಿ ಎ ವರ್ಗದ 10, ಬಿ ವರ್ಗದ 13 ಹಾಗೂ ಸಿ ವರ್ಗದ 2099 ದೇವಾಲಯವಿದೆ. 2022-23ರಲ್ಲಿ ಈ ದೇವಾಲಯಗಳ ಅಭಿವೃದ್ಧಿಗೆ 90 ಲಕ್ಷ ರೂ ಮಾತ್ರ ಖರ್ಚು ಮಾಡಲಾಗಿತ್ತು. 2024-25ರಲ್ಲಿ 1.28 ಕೋಟಿ ರೂ, 2024-25 ರಲ್ಲಿ 3.05 ಕೋಟಿ ರೂ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ.

ಕೆ.ಆರ್.ಪೇಟೆ, ಪಾಂಡವಪುರ, ಮತ್ತು ಮಳವಳ್ಳಿಯಲ್ಲಿ ತಲಾ 2, ಮಂಡ್ಯದಲ್ಲಿ 1, ಶ್ರೀರಂಗಪಟ್ಟಣದಲ್ಲಿ 3 ಸೇರಿ ಜಿಲ್ಲೆಯಲ್ಲಿ ಒಟ್ಟು 10 ಎ ದರ್ಜೆಯ ದೇವಾಲಯಗಳಿವೆ. ಮಂಡ್ಯದಲ್ಲಿ 3, ಮದ್ದೂರಿನಲ್ಲಿ 5, ಮಳವಳ್ಳಿ ಮತ್ತು ಶ್ರೀರಂಗಪಟ್ಟಣದಲ್ಲಿ ತಲಾ 2, ನಾಗಮಂಗಲದಲ್ಲಿ 1 ಸೇರಿ ಒಟ್ಟು 13 ಬಿ ದರ್ಜೆ, ಮಂಡ್ಯ 287, ಮದ್ದೂರು 280, ಮಳವಳ್ಳಿ 261, ಶ್ರೀರಂಗಪಟ್ಟಣ 143, ಪಾಂಡವಪುರ 227, ನಾಗಮಂಗಲ 561, ಕೆ.ಆರ್.ಪೇಟೆ 340 ಸೇರಿ ಒಟ್ಟು 2,099 ಸಿ ದರ್ಜೆಯ ದೇವಾಲಯಗಳಿವೆ.

ಮಂಡ್ಯ ತಾಲೂಕಿಗೆ 2022-23ರಲ್ಲಿ 4 ಲಕ್ಷ ರೂ., 2023-24 ರಲ್ಲಿ 21 ಲಕ್ಷ ರೂ., 2024-25 ನೇ ಸಾಲಿನಲ್ಲಿ 76.60 ಲಕ್ಷ ರೂ ಖರ್ಚು ಮಾಡಲಾಗಿದೆ. ಮದ್ದೂರು ತಾಲೂಕಿನ ದೇವಾಲಯಕ್ಕೆ 2022ರಲ್ಲಿ 10 ಲಕ್ಷ ರೂ, 2023-24 ನೇ ಸಾಲಿನಲ್ಲಿ 17.50 ಲಕ್ಷ ರೂ. ಖರ್ಚು ಮಾಡಲಾಯಿತು. 2024-25 ನೇ ಸಾಲಿಗೆ 35 ಲಕ್ಷ ರೂ ಬಿಡುಗಡೆ ಮಾಡಲಾಗಿದೆ. ಮಳವಳ್ಳಿ ತಾಲೂಕಿಗೆ 2022ರಲ್ಲಿ 33 ಲಕ್ಷ ರೂ, 2023-24 ರಲ್ಲಿ 37.75 ಲಕ್ಷ ರೂ ಬಿಡುಗಡೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಇನ್ನೂ ಹಣ ಬಿಡುಗಡೆಯಾಗಿಲ್ಲ.

ಪಾಂಡವಪುರ ತಾಲೂಕಿನ ಮುಜರಾಯಿ ದೇವಸ್ಥಾನದ ಅಭಿವೃದ್ಧಿಗಾಗಿ 2022ರಲ್ಲಿ 15 ಲಕ್ಷ ರೂ ಬಿಡುಗಡೆ ಆಗಿತ್ತು. 2023-24 ರಲ್ಲಿ 5 ಲಕ್ಷ ರೂ ಬಿಡುಗಡೆಯಾಗಿತ್ತು. ಈ ವರ್ಷ ಇನ್ನೂ ಹಣ ಬಂದಿಲ್ಲ. ಶ್ರೀರಂಗಪಟ್ಟಣಕ್ಕೆ 2022ರಲ್ಲಿ ಯಾವುದೇ ಅನುದಾನ ದೊರೆತಿರಲಿಲ್ಲ. 2023ರಲ್ಲಿ 10 ಲಕ್ಷ ರೂ. 2024ನೇ ಸಾಲಿನಲ್ಲಿ 1.79 ಕೋಟಿ ರೂ., ನಾಗಮಂಗಲ ತಾಲೂಕಿಗೆ 2022ರಲ್ಲಿ 28 ಲಕ್ಷ ರೂ ಬಿಡುಗಡೆ ಆಗಿತ್ತು. 2023ರಲ್ಲಿ 35 ಲಕ್ಷ ರೂ., 2024ರಲ್ಲಿ 14.50 ಲಕ್ಷ ರೂ. ಬಿಡುಗಡೆಯಾಗಿದೆ. ಕೆ.ಆರ್.ಪೇಟೆ ತಾಲೂಕಿಗೆ 2022 ರಲ್ಲಿ ಹಣ ಬಿಡುಗಡೆ ಆಗಿರಲಿಲ್ಲ. 2023 ರಲ್ಲಿ 2.50 ಲಕ್ಷ ರೂ ಬಿಡುಗಡೆ ಆಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net