ಕಬ್ಬಿನ ಕೃಷಿ ವೆಚ್ಚ ತಗ್ಗದಿದ್ದರೆ ಆದಾಯ ವೃದ್ಧಿ ಅಸಾಧ್ಯ

mysore
Published on

ಮೈಸೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಬ್ಬಿನ ಕೃಷಿಗೆ ಹಲವು ಸವಾಲುಗಳು ಎದುರಾಗಿವೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಕಬ್ಬು ತಳಿ ಸಂಸ್ಥೆ ನಿರ್ದೇಶಕಿ ಡಾ.ಜಿ.ಹೇಮಪ್ರಭಾ ಹೇಳಿದರು.


ಕೋರಮಂಡಲ್ ಶುಗರ್ಸ್ ಲಿ., ಎಸ್.ನಿಜಲಿಂಗಪ್ಪ ಶುಗರ್ ಇನ್ಸ್ಟಿಟ್ಯೂಟ್, ಕೊಯಮತ್ತೂರು ಐಸಿಎಆರ್, ಎಂ.ವಿಶ್ವೇಶ್ವರಯ್ಯ ಶುಗರ್ ಕೇನ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಸಹಯೋಗದಲ್ಲಿ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ದಕ್ಷಿಣ ಕರ್ನಾಟಕದ 22ನೇ ಕಬ್ಬು ಸಂಶೋಧನೆ ಮತ್ತು ಅಭಿವೃದ್ಧಿ’ ಕಾರ್ಯಾಗಾರದಲ್ಲಿ ಮಾತನಾಡಿದರು.


ದಕ್ಷಿಣ ಭಾರತದಲ್ಲಿ ಇಳುವರಿ ಉತ್ತಮವಿದ್ದರೂ ರಿಕವರಿ ಇಳುವರಿ ಕಡಿಮೆ ಇದೆ. ಹೀಗಾಗಿ, ಹೈ ಸುಕ್ರೋಸ್ ವೆರೈಟಿ ಬೆಳೆಯಲು ಒತ್ತು ನೀಡಬೇಕಿದೆ. ಕೃಷಿ ವೆಚ್ಚವನ್ನು ಕಡಿಮೆ ಮಾಡದಿದ್ದರೆ ಆದಾಯ ವೃದ್ಧಿಯಾಗುವುದು ಅಸಾಧ್ಯ. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವೆಚ್ಚವನ್ನು ತಗ್ಗಿಸಬೇಕು. ವಾರ್ಷಿಕವಾಗಿ ಒಂದು ಬೆಳೆಯಲ್ಲಿ ಆದಾಯ ಬರದಿದ್ದಲ್ಲಿ ಆರ್ಥಿಕ ನಷ್ಟವಾಗಲಿದೆ ಎಂದರು.


ಮೈಸೂರು ಕಬ್ಬು ಬೆಳೆಯುವ ರೈತರಿಗೆ ಆದಾಯ ಬರಬೇಕಾದರೆ ಕೃಷಿ ವೆಚ್ಚವನ್ನು ತಗ್ಗಿಸಿಕೊಳ್ಳುವ ಜತೆಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಎಥೆನಾಲ್, ಬಯೋ ಎಥೆನಾಲ್ ಉತ್ಪಾದನೆಗೆ ಶೇ.89ರಷ್ಟು ಎಥೆನಾಲ್ ಕಬ್ಬಿನಿಂದಲೇ ಉತ್ಪಾನೆಯಾಗುತ್ತಿದೆ. ಇದು ಹೆಚ್ಚಾದಷ್ಟು ಹಲವು ಕ್ಷೇತ್ರಗಳಿಗೆ ಅನುಕೂಲವಾಗಲಿದೆ ಎಂದರು.


ಸಕ್ಕರೆ ಈಗ ದೇಶದಲ್ಲಿ ಎನರ್ಜಿ ಬೆಳೆಯಾಗಿ ಪರಿವರ್ತನೆಯಾಗಿದೆ. ಭಾರತದಲ್ಲಿ ಇದರ ಉತ್ಪಾದನೆ ಹಾಗೂ ಶಕ್ತಿ ಇಂಧನ ಬಳಕೆಯಾಗಿಯೂ ಏರಿಕೆಯಾಗಿದೆ. ದೇಶದಲ್ಲಿ ವಾರ್ಷಿಕ 27.8 ಮಿಲಿಯನ್ ಟನ್ ಸಕ್ಕರೆ ಬೇಡಿಕೆ ಇದೆ ಎಂದರು.


ಉತ್ತರಪ್ರದೇಶ, ಬಿಹಾರ ರಾಜ್ಯದ ನಂತರ ಕರ್ನಾಟಕವು ಕಬ್ಬು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಉತ್ತರಪ್ರದೇಶ, ಮಹಾರಾಷ್ಟ್ರ ಬಳಿಕ ಕರ್ನಾಟಕದಲ್ಲಿ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿದೆ. 2021-22ರಲ್ಲಿ 11 ಲಕ್ಷ ಟನ್ ಸಕ್ಕರೆ ರಫ್ತಾಗಿದ್ದು, ಇದು ಬಾಸುಮತಿ ಅಕ್ಕಿಗಿಂತ ಅಧಿಕವಾಗಿದೆ. ಆದರೆ ಈ ವರ್ಷ ಉತ್ಪಾದನೆ ಪ್ರಮಾಣ ತಗ್ಗುವ ಸಾಧ್ಯತೆ ಇದೆ ಎಂದರು.


ಕಬ್ಬಿನ ಹಲವು ಹೊಸ ತಳಿಗಳು ಬಿಡುಗಡೆಗೊಂಡಿವೆ. ಕಳೆದ 2 ವರ್ಷದಿಂದ 10 ತಳಿಗಳನ್ನು ಸಂಶೋಧನೆ ಮಾಡಿ ರೈತರಿಗೆ ಪರಿಚಯಿಸಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net