

ಹರಪನಹಳ್ಳಿ: ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ತೆರೆಯುವುದರಿಂದ ಅತ್ಯುತ್ತಮ ಲಾಭ ಗಳಿಸಬಹುದು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಕೆ.ಕಲ್ಲಹಳ್ಳಿಯಲ್ಲಿ ಶುಕ್ರವಾರ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಹೈನುಗಾರಿಕೆ ತರಬೇತಿ ಹಾಗೂ ಹಸುಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೈನುಗಾರಿಕೆಯಿಂದ ನಿತ್ಯ ಹಣ ಗಳಿಸುವ ಸುಲಭ ಮಾರ್ಗವಾಗಿದ್ದು, ಮನೆಯ ದಿನದ ಖರ್ಚಿಗೆ ನೆರವಾಗಲಿದೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಸ್ಥಾಪಿತವಾಗಿರುವ ಸಂಘಗಳಲ್ಲಿ ಗುಣಮಟ್ಟದ ಹಾಲನ್ನು ನೀಡಿ ದುಪ್ಪಟ್ಟು ಹಣಗಳಿಸಲು ಸಹಕಾರಿಯಾಗಿದೆ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ಸಿ.ಉಮೇಶ್ ಮಾತನಾಡಿ, ಹಲವು ದಶಕಗಳಿಂದ ರಾಸಾಯನಿಕಯುಕ್ತ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಭೂಮಿಯು ತನ್ನ ನೈಸರ್ಗಿಕ ಸತ್ವ ಕಳೆದುಕೊಳ್ಳುತ್ತಿದೆ. ಇದರಿಂದ ಇಳುವರಿ ಕಡಿಮೆಯಾಗಿ ರೈತರು ಹೆಚ್ಚಿನ ಲಾಭ ಪಡೆಯಲು ಆಗುತ್ತಿಲ್ಲ.
ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ಗುಣಮಟ್ಟದ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಬಹುದು. ಕೃಷಿ ಜತೆಗೆ ಹೈನುಗಾರಿಕೆ ಕೈಗೊಳ್ಳುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂದರು.