

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಪಟ್ಟಿಯಲ್ಲಿ (ಒಬಿಸಿ) ವೀರಶೈವ ಲಿಂಗಾಯತದ ಎಲ್ಲ ಒಳಪಗಂಡಗಳನ್ನು ಸೇರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಒತ್ತಾಯಿಸಿದರು.
ಕನ್ನಡ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ನಗರದ ಚವ್ಹಾಣ ಗ್ರೀನ್ ಗಾರ್ಡನ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಹುಬ್ಬಳ್ಳಿ ತಾಲೂಕು ಬಣಜಿಗ ಬಂಧುಗಳ ‘ಸಂಕ್ರಾಂತಿ ಸಂಭ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಹೇಳುವೆ. ತೆಲಂಗಾಣದಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಹಾರಾಷ್ಟ್ರ ಸರ್ಕಾರವೂ ಇದೇ ಹಾದಿ ತುಳಿದಿದೆ. ಇದರಿಂದ ನಮ್ಮ ಸಮಾಜಕ್ಕೆ ಬಹಳಷ್ಟು ಒಳಿತಾಗಲಿದೆ ಎಂದರು.
ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗಬೇಕು. ನಾವೆಲ್ಲ ಮುಖ್ಯವಾಹಿನಿಗೆ ಬಂದು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಜಾತಿ ಗಣತಿ ನಡೆಯುವ ವೇಳೆ ನಮ್ಮ ಸಮಾಜದವರು ಸರಿಯಾದ ಮಾಹಿತಿ ಕೊಡಬೇಕು. ವೈಜ್ಞಾನಿಕ ತಳಹದಿಯ ಮೇಲೆ ನಡೆಯುವ ಈ ಗಣತಿಯಿಂದ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ವೀರಶೈವ ಲಿಂಗಾಯತ ಎನ್ನುವುದಕ್ಕಿಂತ ಹಿಂದುಗಳೆಂಬ ಭಾವನೆ ನಮ್ಮಲ್ಲಿ ಮೂಡಬೇಕು. ಜಾತಿ ಗಣತಿಯ ಅಗತ್ಯವಿಲ್ಲ. ಇದು ಆಘಾತ ಪರಿಸ್ಥಿತಿ ತಂದೊಡ್ಡಲಿದೆ. ಒಳಪಂಗಡಕ್ಕೆ ಹೊಡೆತ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಣಜಿಗ ಸಮಾಜಕ್ಕೆ ಸಂಘಟನೆ ಅಗತ್ಯ. ಮುಂದಿನ ಪೀಳಿಗೆ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯತತ್ಪರರಾಗಬೇಕು ಎಂದು ಸಲಹೆ ನೀಡಿದರು.
ಭಂಡಿವಾಡ ಗಿರೀಶ ಆಶ್ರಮದ ಡಾ.ಎ.ಸಿ. ವಾಲಿ ಮಹಾರಾಜ ಸಾನ್ನಿಧ್ಯ ವಹಿಸಿ ಮಾತನಾಡಿ, ದಾನ-ಧರ್ಮದಲ್ಲಿ ಬಣಜಿಗರು ಯಾವತ್ತು ಮುಂದೆ ಇದ್ದಾರೆ. ಈ ಸಮಾಜ ಸಂಘಟನೆಯಾದರೆ ಮನೆ ಮನೆಯಲ್ಲಿ ಬೆಳಕು ಮೂಡಲಿದೆ. ಸಮಾಜಕ್ಕೂ ದಾರಿ ದೀಪವಾಗಲಿದೆ ಎಂದರು.
ರಾಯನಾಳ ವಿರಕ್ತಮಠದ ಶ್ರೀ ಅಭಿನವ ರೇವಣಸಿದ್ಧ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತೀಯ ಸನಾತನ ಧರ್ಮದಲ್ಲಿ ಪ್ರತಿ ಹಬ್ಬ-ಹರಿದಿಗಳಿಗೆ ವೈಜ್ಞಾನಿಕ ತಳಹದಿ ಇದೆ. ಋತುಮಾನ ಆಧರಿಸಿದ ಹಬ್ಬಗಳು ಆಹಾರ ಪದ್ಧತಿ-ಆಚರಣೆಗಳನ್ನು ತಂದಿರಿಸುತ್ತವೆ. ಸಂಕ್ರಾಂತಿ ಹಬ್ಬವು ಬಣಜಿಗರ ಹಬ್ಬ. ರೈತರು ಬೆಳೆದ ಫಸಲು ಮನೆಗೆ ತಂದು ಇವರ ಬಳಿಯೇ ಮಾರಾಟ ಮಾಡುತ್ತಾರೆ. ಇದು ವ್ಯಾಪಾರಿಗಳು ಹಾಗೂ ರೈತರಲ್ಲಿ ಹರ್ಷವನ್ನು ಮೂಡಿಸುತ್ತದೆ ಎಂದರು.
ಉದ್ಯಮಿ ರಾಜು ಶೀಲವಂತರ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ಸಾಧಕರಾದ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ದಂಪತಿ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಉದ್ಯಮಿ ವೀರೇಂದ್ರ ಕೌಜಲಗಿ, ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ, ಪ್ರಮುಖರಾದ ಆನಂದ ಉಪ್ಪಿನ, ಎಸ್.ವಿ. ಅಂಗಡಿ, ತಾರಾದೇವಿ ವಾಲಿ ಇತರರು ಇದ್ದರು.
ಬಾಕ್ಸ್….
ಮಕ್ಕಳು, ಹಿರಿಯರ ಮನೋರಂಜನೆ
ಮಕ್ಕಳು, ಹಿರಿಯರು ಸಾಂಪ್ರದಾಯಿಕ ಉಡುಪು ಧರಿಸಿ ಗಮನ ಸೆಳೆದರು. ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿದರು. ಮಹಿಳೆಯರು ಮತ್ತು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಹಿರಿಯರಿಗೆ ವಿಶೇಷ ಮನೋರಂಜನಾತ್ಮಕ ಆಟಗಳು ಆಯೋಜಿಸಲಾಗಿತ್ತು. ಹಾಸ್ಯ ಕಲಾವಿದರು ನಗೆಯ ಬುಗ್ಗೆ ಹರಿಸಿದರು. ಹರ್ಲಾಪುರದ ಸಿವೈಸಿಡಿ ಕಲಾ ತಂಡ ಜಾನಪದ ಗೀತೆ ಹಾಡಿ ಎಲ್ಲರನ್ನೂ ರಂಜಿಸಿದರು.
ಬಣಜಿಗರು ಪ್ರತಿ ವರ್ಷ ಸಂಕ್ರಾಂತಿ ಹಬ್ಬವನ್ನು ಸಡಗರಿಂದ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸಮಾಜದವರು ಸಂಭ್ರಮ, ಸಂತೋಷದಿಂದ ಹಬ್ಬದಲ್ಲಿ ಪಾಲ್ಗೊಂಡಿದ್ದು ನೋಡಿ ನನಗೆ ತುಂಬಾ ಖುಷಿಯಾಗಿದೆ.
-ಡಾ. ವಿಜಯ ಸಂಕೇಶ್ವರ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್