ಶಾಲಾ-ಕಾಲೇಜು ಪಠ್ಯದಲ್ಲಿ ಸಂಗೀತ ಸೇರಿಸಿ: ಗಾನ ಕಲಾವಿದ ವಿದ್ವಾನ್ ಡಾ.ಆರ್.ಕೆ.ಪದ್ಮನಾಭ ಒತ್ತಾಯ

padmanabha
Published on

ಅವಿನಾಶ್ ಜೈನಹಳ್ಳಿ ಮೈಸೂರು

‘ಶಾಲಾ- ಕಾಲೇಜಿನ ಪಠ್ಯದಲ್ಲೂ ಸಂಗೀತ ಪಾಠವನ್ನು ಸೇರಿಸುವ ಕೆಲಸ ಆಗಬೇಕು... ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು... ಸಂಗೀತದಿಂದ ಒಳ್ಳೆಯ ಚಿಂತನೆಗಳು, ಭಾವನೆಗಳು ಬೆಳೆಯುತ್ತದೆ... ಶಾಂತಿಯುತ ಜೀವನಕ್ಕೆ ಬೇಕಾದ ಎಲ್ಲವನ್ನೂ ಸಂಗೀತ ನೀಡುತ್ತದೆ. ಈಗ ಸಂಗೀತ ಏನನ್ನು ಕೊಡುತ್ತದೆ ಎನ್ನುವುದನ್ನು ತಿಳಿಸುವ ಕೆಲಸವೂ ನಡೆಯಬೇಕು'...

ಇದು ಗಾನಭೂಷಣ, ಗಾನ ಕಲಾವಿದ ವಿದ್ವಾನ್ ಡಾ.ಆರ್.ಕೆ.ಪದ್ಮನಾಭ ಒತ್ತಾಯ. ಸದ್ವಿದ್ಯಾ ಶಾಲೆಯ ಟಿ.ಪಿ.ಕೈಲಾಸಂ ರಂಗ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಗೀತ ಕಛೇರಿಗೂ ಮುನ್ನ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಾಪಾಡಿಕೊಂಡು ಹೋಗುವ ಬಗ್ಗೆ, ಸಂಗೀತ ಅಭ್ಯಾಸದಿಂದ ದೊರೆಯುವ ಅನುಕೂಲದ ಬಗ್ಗೆ ತಿಳಿಸಿದರು.

ಈ ಹಿಂದೆ ಸಂಗೀತವೂ ಪಠ್ಯದ ಭಾಗವಾಗಿತ್ತು. ನಾವು ಶಾಲೆಯಲ್ಲಿ ಕಲಿಯುವಾಗ ಸಂಗೀತಕ್ಕೆ ಪ್ರತ್ಯೇಕ ಶಿಕ್ಷಕರು ಇದ್ದರು. ಬಳಿಕ ಎಲ್ಲವನ್ನು ತೆಗೆದುಹಾಕಿದ್ದಾರೆ. ಇದು ಬಹಳ ಅನ್ಯಾಯ. ಶಾಲಾ-ಕಾಲೇಜಿನಲ್ಲಿ ಯೋಗ-ಸಂಗೀತ ಎರಡು ಇರಬೇಕು. ಸಂಗೀತವನ್ನು ಪಠ್ಯದಲ್ಲಿ ಸೇರಿಸಿ ಪ್ರತಿ ಶಾಲೆಗೆ ಒಬ್ಬ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಯೋಗ ಅದು ಭೌತಿಕ ಯೋಗವಾದರೆ, ಸಂಗೀತ ಗಾನ ಯೋಗವಾಗಿದೆ. ಎಲ್ಲವೂ ಪಾರಮಾರ್ಥಿಕವಾದದ್ದು ಎಂದರು.

ಇಂದಿನ ಯುವಕರು ತುಂಬಾ ಬುದ್ಧಿವಂತರಿದ್ದಾರೆ. ಅವರಿಗೆ ಗ್ರಹಿಕಾ ಶಕ್ತಿ ಇದೆ. ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಎಲ್ಲವನ್ನೂ ಒಪ್ಪಿಕೊಳ್ಳದೆ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಂಡಿದ್ದಾರೆ. ಯುವಕರು ಸಂಗೀತವನ್ನು ಗಂಭೀರವಾಗಿ ತೆಗೆದುಕೊಂಡು ಅಧ್ಯಯನ ಮಾಡಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ, ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಗೀತಕ್ಕೆ ಕರ್ನಾಟಕದ ಕೊಡುಗೆ ಅನನ್ಯ

ಕರ್ನಾಟಕ ಸಂಗೀತಕ್ಕೆ ನಮ್ಮ ರಾಜ್ಯ ಅನನ್ಯ ಕೊಡುಗೆ ನೀಡಿದೆ. ಅದು ಎಷ್ಟೋ ಜನರಿಗೆ ಗೊತ್ತಿಲ್ಲ. ಕಲೆ ಫಲ ಕೊಟ್ಟೇ ಕೊಡುತ್ತದೆ. ಕಲಾದೇವಿ ಎಂದೂ ಕೈ ಬಿಡಲ್ಲ. ಅದಕ್ಕೆ ನಾನೇ ಉದಾರಣೆ. ನಾನು ಹಳ್ಳಿಯಿಂದ ಬಂದರೂ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದುಕೊಂಡೆ. ನನಗೆ ದೆಹಲಿ ಯಾವ ಮೂಲೆಯಲ್ಲಿದೆ ಎಂದೂ ಗೊತ್ತಿರಲಿಲ್ಲ. ನಕ್ಷೆಯಲ್ಲೂ ನೋಡಿರಲಿಲ್ಲ. ಆದರೆ, ಅಲ್ಲೇ ಹೋಗಿ ಪ್ರಶಸ್ತಿ ಪಡೆದಿರುವುದು ಇದಕ್ಕೆಲ್ಲ ಸಂಗೀತವೇ ಕಾರಣ. ಯುವಕರು ಸಂಗೀತ ಕಛೇರಿ ಮಾಡಲೇಬೇಕು ಅಂತ ಏನೂ ಇಲ್ಲ. ಸಂಗೀತದಲ್ಲಿ ಜ್ಞಾನ ಪಡೆದರೂ ಸಾಕು. ಸಂಗೀತ ಮಾನಸಿಕ ವಿಕಾಸಕ್ಕೆ ತುಂಬ ಅನುಕೂಲ ಕಲ್ಪಿಸುತ್ತದೆ ಎಂದರು.

ಸಂಗೀತದಲ್ಲಿ ಜಾತ್ಯತೀತತೆ ಇದೆ

ಜಾತ್ಯತೀತತೆ ಬಗ್ಗೆ ಎಲ್ಲ ಮಾತನಾಡುತ್ತಾರೆ. ಆದರೆ, ಎಲ್ಲೂ ಅದನ್ನು ಕಾಣಲಾಗುತ್ತಿಲ್ಲ. ಜಾತ್ಯತೀತತೆ ಎಂದರೆ ಸಂಗೀತ ಮಾತ್ರ. ಹಿಂದು, ಮುಸ್ಲಿಂ, ಕ್ರೈಸ್ತ ಎಲ್ಲರಿಗೂ ಸಂಗೀತದಲ್ಲಿ ಒಂದೇ ಸ್ವರ. ಇದರಿಂದ ಮಾನವೀಯತೆ, ಸಮಾನತೆ, ಪ್ರೀತಿ ಬೆಳೆಯುತ್ತದೆ. ಎಲ್ಲ ಒಂದೇ ಎಂದು ಸಂಗೀತ ತಿಳಿಸುತ್ತದೆ ಎಂದು ಡಾ.ಆರ್.ಕೆ.ಪದ್ಮನಾಭ ಹೇಳಿದರು.

ಉಳಿಸುವ ಕೆಲಸ ಆಗಬೇಕು

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು. ಯುವ ಜನಾಂಗ ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಧ್ಯಯನ, ಅಭ್ಯಾಸ, ಸಾಧನೆ ಮಾಡಬೇಕಾಗಿದೆ. ಪಾಲಕರು, ಹಿರಿಯರು ಮಕ್ಕಳಿಗೆ ಹೆಚ್ಚಿನ ಉತ್ತೇಜನ ನೀಡುವ ಕೆಲಸವಾಗಬೇಕು. ಮುಖ್ಯವಾಗಿ ಪಾಲಕರಿಂದ ಅಗಾಧವಾದ ಪ್ರೋತ್ಸಾಹ ಬೇಕಾಗಿದೆ ಎನ್ನುತ್ತಾರೆ ಡಾ.ಆರ್.ಕೆ.ಪದ್ಮನಾಭ.

ನಿರಂತರವಾಗಿ ಸಾಧನೆ ಮಾಡಬೇಕು

ಯಾರೂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಾಟಚಾರಕ್ಕೆ ಅಭ್ಯಾಸ ಮಾಡಲು ಆಗಲ್ಲ. ತುಂಬಾ ಶ್ರಮಪಟ್ಟು ಸಾಧನೆ ಮಾಡಬೇಕಾದ ಸಂಗೀತ ಪದ್ಧತಿ ಇದಾಗಿದೆ. ಒಂದೆರಡು ವರ್ಷದಲ್ಲಿ ಸಾಧನೆ ಮಾಡಲು ಆಗಲ್ಲ. ನಿರಂತರವಾಗಿ ಹತ್ತಾರು ವರ್ಷ ಸಾಧನೆ ಮಾಡಬೇಕಾಗಿದೆ. ಇದರಿಂದ ಅನೇಕ ಅನುಕೂಲಗಳನ್ನು ನೋಡಬಹುದು. ಶಾಲಾ, ಕಾಲೇಜಿಗೆ ಹೋಗುವವರೆಲ್ಲ ಸಂಗೀತ ಕಲಿಯಬೇಕು. ಎಲ್ಲರೂ ಪ್ರದರ್ಶನ ನೀಡಬೇಕಾಗಿಲ್ಲ. ಇದರಿಂದ ನಮಗೆ ಉಸಿರಾಟ ಕ್ರಿಯೆ ಹೆಚ್ಚಾಗಿ ಆಗುತ್ತದೆ. ರಕ್ತಚಲನೆ ಸರಿಯಾಗಿ ನಡೆಯುತ್ತದೆ. ದೇಹ ಶುದ್ಧಿಯಾಗಿ, ಆರೋಗ್ಯವಾಗಿ ಇರಬಹುದು. ಸಂಗೀತದಿಂದ ಒಳ್ಳೆಯ ಚಿಂತನೆಗಳು, ಭಾವನೆಗಳು, ಒಳ್ಳೆಯ ಸಂಘ ಬೆಳೆಯುತ್ತದೆ. ಶಾಂತಿಯುತ ಜೀವನಕ್ಕೆ ಬೇಕಾದ ಎಲ್ಲವನ್ನೂ ಸಂಗೀತ ನೀಡುತ್ತದೆ. ಈಗ ಸಂಗೀತ ಏನನ್ನು ಕೊಡುತ್ತದೆ ಎನ್ನುವುದನ್ನು ತಿಳಿಸಿಕೊಡುವ ಕೆಲಸ ಆಗಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net