

ಬೆಂಗಳೂರು: ಶಿಕ್ಷಣವು ಸೇವಾ ಕ್ಷೇತ್ರದಿಂದ ಉದ್ಯಮವಾಗಿ ಬದಲಾಗಿರುವ ಪರಿಣಾಮ, ಅದರ ಪರಿಭಾಷೆ ಬದಲಾಗಿದೆ. ಎಲ್ಲ ಸರ್ಕಾರಗಳು ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ್ಯಿಸುತ್ತಿರುವ ಕಾರಣ ಶಿಕ್ಷಣವನ್ನು ಗ್ಯಾರಂಟಿ ಪಟ್ಟಿಯಲ್ಲಿ ಸೇರಿಸುವ ಅನಿವಾರ್ಯತೆ ಇದೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಪರಿಷತ್ತು ವತಿಯಿಂದ ’ಸೇವಾ ನಿವೃತ್ತರಾದ ಪ್ರಾಧ್ಯಾಪಕರಿಗೆ ಗೌರವ ಸಮರ್ಪಣೆ ಸಮಾರಂಭ’ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಿಸುವ ಕಡೆ ಗಮನ ಹರಿಸುವ ಸರ್ಕಾರಗಳು, ವಿಶ್ವವಿದ್ಯಾಲಯಗಳ ಮೂಲ ಸೌಕರ್ಯವನ್ನು ಮರೆತಂತಿದೆ. ಈ ಬಗ್ಗೆ ಅಧ್ಯಾಪಕರ ಸಂಘಟನೆಗಳು ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಎಂದಿಗೂ ಸೇವೆಯ ಭಾಗವಾಗಬೇಕಿತ್ತು. ಆದರೆ, ಉದ್ಯಮಗಳಾಗಿ ಬೆಳೆದಿದೆ. ಉದ್ಯಮವೇ ಪ್ರಮುಖ ಭಾಗವಾಗಿರುವ ಸಮಾಜವನ್ನು ನಿರ್ಮಾಣ ಮಾಡಿರುವುದರಿಂದ ಇಡೀ ಶಿಕ್ಷಣ ವ್ಯವಸ್ಥೆಯ ಪರಿಭಾಷೆ ಬದಲಾಗಿದೆ. ಗ್ಯಾಟ್ ಒಪ್ಪಂದದಲ್ಲಿ ಪ್ರಾಧ್ಯಾಪಕರನ್ನು ಕಾರ್ಮಿಕ, ವಿದ್ಯಾರ್ಥಿಗಳನ್ನು ಗ್ರಾಹಕ ಎಂದು ಉಲ್ಲೇಖಿಸಲಾಗಿದೆ. ವಿದ್ಯಾರ್ಥಿಗಳ ಬದುಕು ರೂಪಿಸುವ ಶಿಕ್ಷಕರನ್ನು ಕಾರ್ಮಿಕ ಎಂದು ಹೇಳುವುದಾರೆ ಶಿಕ್ಷಣ ಕ್ಷೇತ್ರದ ವಸ್ತುಸ್ಥಿತಿ ಮತ್ತು ಉದ್ಯಮಕ್ಷೇತ್ರದ ಪ್ರಾಬಲ್ಯ ಕಾಣುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣವನ್ನು ಮೊದಲು ಶಿಕ್ಷಣ ಗ್ಯಾರೆಂಟಿ ಪಟ್ಟಿಯಲ್ಲಿ ಸೇರಬೇಕು. ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳಲ್ಲಿ ಕಾಯಂ ಪ್ರಾಧ್ಯಾಪಕ, ಉಪನ್ಯಾಸಕರ ಕೊರತೆ ಎದ್ದು ಕಾಣುತ್ತಿದೆ. ಕೆಲವು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಬೆರಳೆಣಿಕೆಯಷ್ಟು ಕಾಯಂ ಪ್ರಾಧ್ಯಪಕರಿಲ್ಲ. 13 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಷ್ಟಾದರೂ ಸಮಸ್ಯೆ ಬಗೆ ಹರಿದಿಲ್ಲ. ಇದರಿಂದ ಸಂಶೋಧನೆ ಮತ್ತು ಅಧ್ಯಯನದ ಮೇಲೆ ಪರಿಣಾಮ ಬೀರಲಿದೆ. ಸರ್ಕಾರಗಳು ವಿಶ್ವವಿದ್ಯಾಲಯಗಳನ್ನು ವಿಭಜಿಸಿ ವಿವಿಗಳ ಸಂಖ್ಯೆ ಹೆಚ್ಚಿಸುತ್ತಿದೆಯೇ ಹೊರತು ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿಲ್ಲ. ಹೊಸ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ವಾಹನದ ಪೆಟ್ರೋಲ್‌ಗೂ ಹಣವಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ ಎಂದು ವಾಸ್ತವವಾಂಶವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ 10 ನಿವೃತ್ತ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು. ಈ ವೇಳೆ ಕುಲಸಚಿವ ಶೇಕ್ ಲತ್ೀ, ಕುಲಸಚಿವರು(ಮೌಲ್ಯಮಾಪನ) ಸಿ., ಶ್ರೀನಿವಾಸ್, ಪ್ರಾಧ್ಯಾಪಕರಾದ ಪ್ರೊ. ಸಿ.ಬಿ. ಹೊನ್ನುಸಿದ್ದಾರ್ಥ, ಪ್ರೊ. ಎಸ್. ನಾಗರತ್ನಮ್ಮ, ಪ್ರೊ.ಎಸ್.ಟಿ. ಗಿರೀಶ್, ಪ್ರೊ. ಡಿ.ಕೆ. ಚಿತ್ತಯ್ಯ ಪೂಜಾರ್ ಸೇರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.