ಬಲಿಜ ಸಮಾಜವನ್ನು ೨ಎಗೆ ಸೇರಿಸಿ: ಗಣೇಶ್ ನಾಯ್ಡು

kaivara thathaiah
Published on

ಮಡಿಕೇರಿ: ರಾಜ್ಯದಲ್ಲಿ ಬಲಿಜ ಸಮಾಜಕ್ಕೆ ಈ ಹಿಂದೆ ೨ಎ ಹಿಂದುಳಿದ ವರ್ಗದಡಿ ಮೀಸಲಾತಿ ದೊರೆಯುತ್ತಿದ್ದು, ಈಗ ೩ಬಿ ವ್ಯಾಪ್ತಿಗೆ ಸೇರಿಸಿ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ತೊಂದರೆಯಾಗಿದ್ದು, ಈ ಮೊದಲು ಇದ್ದಂತೆ ಬಲಿಜ ಸಮಾಜವನ್ನು ೨ಎ ಗೆ ಸೇರಿಸುವಂತಾಗಬೇಕು ಎಂದು ನಿವೃತ್ತ ಅಧಿಕಾರಿ ಗಣೇಶ್ ನಾಯ್ಡು ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ(ಕೈವಾರ ತಾತಯ್ಯ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಲಿಜ ಸಮಾಜವು ಹಿಂದುಳಿದ ವರ್ಗಕ್ಕೆ ಬರಲಿದ್ದು, ಬಳೆ ಮಾರುವುದು ಪ್ರಮುಖ ಕಸುಬಾಗಿದೆ. ಹಿಂದೆ ಬಳೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಕೈವಾರ ತಾತಯ್ಯ ಅವರ ತತ್ವಗಳು, ಸಂದೇಶಗಳನ್ನು ಯುವ ಜನರು ತಿಳಿದುಕೊಳ್ಳುವಂತಾಗಬೇಕು. ಬಳೆ ಮಾರುವುದು ಕನಿಷ್ಠ ಕೆಲಸವಲ್ಲ. ಸ್ವ ಉದ್ಯೋಗ ಮಾಡುವಲ್ಲಿ ಬಲಿಜರು ತಮ್ಮದೇ ಆದ ಸ್ಥಾನ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೈವಾರ ತಾತಯ್ಯ ಅವರು ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದಾರೆ. ಕಾಲ ಜ್ಞಾನಿಯಾಗಿ ಎಲ್ಲರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಸಮಕಾಲೀನ ಬದುಕಿನಲ್ಲಿ ಕೈವಾರ ತಾತಯ್ಯ ಅವರ ಜೀವನ ಚರಿತ್ರೆ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಸಮಾಜದ ಅಭಿವೃದ್ಧಿಗೆ ಕೈವಾರ ತಾತಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದರು.

ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾತನಾಡಿ, ರಾಜ್ಯದ ಬಲಿಜ ಮುಖಂಡರು ಹಾಗೂ ಕೊಡಗು ಜಿಲ್ಲೆಯ ಬಲಿಜ ಸಮಾಜದ ಪ್ರಮುಖರೊಂದಿಗೆ ಚರ್ಚಿಸಿ ಕಾಲಜ್ಞಾನಿ ಯೋಗಿ ನಾರಾಯಣ ಯತೀಂದ್ರರ ೩೦೦ನೇ ಅದ್ಧೂರಿ ರಥೋತ್ಸವ ಹಮ್ಮಿಕೊಳ್ಳಲಾಗುವುದು. ಕೊಡಗು ಜಿಲ್ಲೆಯಲ್ಲಿ ೮ ಸಾವಿರಕ್ಕೂ ಅಧಿಕ ಬಲಿಜ ಜನಾಂಗವಿದ್ದು, ಮುಂದಿನ ವ?ರ್ ಮಡಿಕೇರಿಯಲ್ಲಿ ಸುಮಾರು ೩ ಸಾವಿರ ಕ್ಕೂ ಅಧಿಕ ಬಲಿಜ ಜನಾಂಗ ಸಂಘಟಿಸಿ ಅದ್ಧೂರಿ ರಥೋತ್ಸವ, ಸಾಂಸ್ಕೃತಿಕ ಮೆರವಣಿಗೆಯನ್ನು ಸಮಾಜದ ಮುಖಂಡರ ಸಹಕಾರದೊಂದಿಗೆ ಆಯೋಜಿಸಲಾಗುವುದು ಎಂದು ಹೇಳಿದರು.

ಕೈವಾರ ತಾತಯ್ಯ ಜಯಂತಿ ಸರ್ಕಾರಿ ಆಚರಣೆಯಾಗಿ ಘೋ?ಣೆಯಾದ ನಂತರ ಹೆಚ್ಚಿನ ಜನರಲ್ಲಿ ತಾತಯ್ಯ ಅವರ ಕಾಲಜ್ಞಾನ ಅರಿತುಕೊಳ್ಳಲು ಉತ್ಸಾಹ ಕಂಡುಬಂದಿದೆ. ಇಂದು ಕೊಡಗಿನ ವಿವಿಧ ಭಾಗದಲ್ಲಿ ಕೈವಾರ ತಾತಯ್ಯ ಜಯಂತಿಯನ್ನು ಶ್ರದ್ಧಾಭಕ್ತಿಯೊಂದಿಗೆ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಲಿಜ ಸಮಾಜದ ತಾಲೂಕು ಅಧ್ಯಕ್ಷೆ ಟಿ.ಕೆ.ಮೀನಾಕ್ಷಿ ಕೇಶವ ಮಾತನಾಡಿ, ಮಂಗಳ ಸೂತ್ರದಲ್ಲಿ ಕುಂಕುಮ ಅರಿಶಿನ, ಬಳೆ ಪ್ರಮುಖವಾಗಿದ್ದು, ಬಲಿಜ ಜನಾಂಗದವರು ಬಳೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಮಾಜದ ಅಭಿವೃದ್ಧಿಗೆ ಪಣ ತೊಡಬೇಕಿದೆ ಎಂದರು.

ಡಿಡಿಪಿಐ ಕಚೇರಿಯ ಉಪ ಯೋಜನಾ ಸಮನ್ವಯಾಧಿಕಾರಿ ಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮೋಹನ್ ಕುಮಾರ್, ಮಣಜೂರು ಮಂಜುನಾಥ್, ಸಮಾಜದ ಪ್ರಮುಖರಾದ ಟಿ.ಎಸ್.ಸುಮಾ ಉಪಸ್ಥಿತರಿದ್ದರು. ನಾರಾಯಣ ಪೆರಾಜೆ, ಟಿ.ಎಸ್.ಗಾಯತ್ರಿ ಅವರು ಇದೇ ಸಂದರ್ಭದಲ್ಲಿ ಕವನ ಹಾಗೂ ಗೀತಾಗಾಯನ ನಡೆಸಿಕೊಟ್ಟರು. ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net