

ಅರಕೇರಾ: ಗಣೇಶೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಪಿಐ ಕೆ.ಹೊಸಕೇರಪ್ಪ ಹೇಳಿದರು.
ಪಟ್ಟಣದಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಬುಧವಾರ ಮಾತನಾಡಿದರು. ಗಣೇಶೋತ್ಸವದಲ್ಲಿ ಯುವಕರೇ ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ಗಲಾಟೆಗಳಲ್ಲಿ ಭಾಗಿಯಾಗಬಾರದು. ಕೋಮು ಗಲಭೆಗಳಿಗೆ ಅವಕಾಶ ನೀಡಿದರೆ ಪ್ರಕರಣ ದಾಖಲಿಸಲಾಗುವುದು. ಇದರಿಂದ ಯುವಕರ ಭವಿಷ್ಯಕ್ಕೆ ತೊಂದರೆ ಆಗಲಿದೆ ಎಂದು ಎಚ್ಚರಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೂ ಮುನ್ನ ಪೊಲೀಸ್ ಠಾಣೆ, ಗ್ರಾಮ ಪಂಚಾಯಿತಿ, ಜೆಸ್ಕಾಂ ಕಚೇರಿಯಲ್ಲಿ ಅನುಮತಿ ಪಡೆಯಬೇಕು. ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ಡಿಜೆ ಬಳಕೆಗೆ ಅವಕಾಶವಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುವಂತೆ ಹಬ್ಬಗಳನ್ನು ಆಚರಿಸಬಾರದು. 20 ಜನರಿರುವ ಸ್ವಯಂ ಸೇವಕರ ಸಂಘ ಉತ್ಸವದ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಣೇಶೋತ್ಸವ ಸಂದರ್ಭದಲ್ಲಿ ಇಸ್ಪೀಟ್, ಮದ್ಯಪಾನ ಹಾಗೂ ಇತರ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಅನ್ಯ ಧರ್ಮಗಳ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಹರಿ ಬಿಡಬಾರದು. ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳು ಅನ್ಯೋನ್ಯವಾಗಿ ಆಚರಿಸಬೇಕು ಎಂದು ಪಿಐ ಕೆ.ಹೊಸಕೇರಪ್ಪ ತಿಳಿಸಿದರು. ಪೊಲೀಸ್ ಸಿಬ್ಬಂದಿ ದೇವರಾಜ ನಾಯಕ, ಹನುಮೇಶ ಇತರರಿದ್ದರು.