

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಹುರಕಡ್ಲಿ ಅಜ್ಜ ಕಾಲೇಜಿನಲ್ಲಿ ಇಸಿಟಿ ಪರೀಕ್ಷಾ ಕೇಂದ್ರದಲ್ಲಿ ಪೊಲೀಸರು ಬಲವಂತದಿಂದ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬ್ರಾಹ್ಮಣ ಸಮುದಾಯದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಉಪನಗರ ಪೊಲೀಸ್ ಠಾಣೆ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆ ನಡೆಸಿ ಪ್ರತಿಭಟಿಸಲು ಅವಕಾಶ ನೀಡದ ಕಾರಣ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು.
ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ ನಂದನ್ ಏರಿ ಅವರ ಜನಿವಾರ ತೆಗೆಸಿದ್ದು ಅಮಾನವೀಯ ಘಟನೆ. ಇದು ಹಿಂದು ಸಮುದಾಯಕ್ಕೆ ಮಾಡಿದ ಅಪಮಾನ. ಇಂತಹ ಅಧಮೀರ್ಯ ಕೆಲಸ ಮಾಡಿದ್ದು ತಪ್ಪು. ಇದನ್ನು ಉದ್ದೇಶಪೂರ್ವಕ ಮಾಡಿದ್ದು, ಈ ಘಟನೆಗೆ ಕಾರಣರಾದವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪೊಲೀಸರು ಕೆಇಎಯಲ್ಲಿ ಇಲ್ಲದ ನಿಯಮವನ್ನು ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಹೇರಿದ್ದಾರೆ. ಮುಂದೆ ಇಂತಹ ಕೃತ್ಯಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಜರಂಗ ದಳ ಧಾರವಾಡ ವಿಭಾಗ ಸಂಚಾಲಕ ಶಿವಾನಂದ ಸತ್ತಿಗೇರಿ, ಪಾಲಿಕೆ ಸದಸ್ಯ ಶಂಕರ ಶೆಳಕೆ, ಜಿಲ್ಲಾ ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿ ಅನುದೀಪ ಕುಲಕರ್ಣಿ, ಗುರುಶಾಂತ ಹಿರೇಮಠ, ಸಿದ್ದು ಹಿರೇಮಠ, ಜಯತೀರ್ಥ ಮಳಗಿ, ವಿವೇಕ ಏರಿ, ಪಾಲಿಕೆ ಸದಸ್ಯರಾದ ಮಂಜು ಭಟ್ಟನವರ, ವಿಷ್ಣುತಿರ್ಥ ಕೊರ್ಲಹಳ್ಳಿ, ಶಂಕರ ಶೇಳಕೆ, ಇತರರು ಇದ್ದರು.