ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಆಕ್ರೋಶ

23 smg 2
Published on

ಶಿವಮೊಗ್ಗ: ಹುಣಸೋಡು ಗ್ರಾಮದ ಕ್ರಷರ್​ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಅಬ್ಬಲಗೆರೆಯಲ್ಲಿ ಶಿವಮೊಗ್ಗ-ಶಿಕಾರಿಪುರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದು ಗ್ರಾಮಾಂತರ ಠಾಣೆ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿ ಬಿಡುಗಡೆಗೊಳಿಸಿದರು.

ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ರಾಜಕೀಯ ಮುಖಂಡ ಕುಮ್ಮಕ್ಕಿನಿಂದ ಅಕ್ರಮ ಕಲ್ಲುಗಾಣಿಕೆ ನಡೆಯುತ್ತಿದ್ದು, ಅಮಾಯಕರು ಬಲಿಯಾಗುತ್ತಿದ್ದಾರೆ. ಸರ್ಕಾರಕ್ಕೆ ಅರಿವಿದ್ದರೂ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು. ರಸ್ತೆ ತಡೆ ಚಳವಳಿ ಪರಿಣಾಮ ಸುಮಾರು 2 ಕಿಮೀ ದೂರ ವಾಹನಗಳು ನಿಂತಿದ್ದು, ಟ್ರಾಫಿಕ್ ಜಾಮ್ ಆಗಿತ್ತು.

ಅಬ್ಬಲಗೆರೆ ಗ್ರಾಪಂ ಎದುರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಹೆದ್ದಾರಿ ತಡೆ ಚಳವಳಿ ಮಾಡಿದ ನೂರಾರು ಕಾರ್ಯಕರ್ತರು ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮರಳು, ಕಲ್ಲು ಗಣಿಗಾರಿಕೆ ಹೆಸರಲ್ಲಿ ಕೋಟ್ಯಂತರ ರೂ. ಲೂಟಿ ನಡೆದಿದೆ ಎಂದು ದೂರಿದರು.

ದೊಡ್ಡಪೇಟೆ ಸಿಪಿಐ ವಸಂತ್​ಕುಮಾರ್ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರೂ ಪ್ರಯೋಜನ ಆಗಲಿಲ್ಲ. ಆನಂತರ ಗ್ರಾಮಾಂತರ ಠಾಣೆ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ, ಡಾ. ಶ್ರೀನಿವಾಸ ಕರಿಯಣ್ಣ, ಜಿಪಂ ಸದಸ್ಯ ಕಲಗೋಡು ರತ್ನಾಕರ್, ಎಸ್.ಪಿ.ಶೇಷಾದ್ರಿ, ಪ್ರಮುಖರಾದ ವಿಜಯಲಕ್ಷ್ಮೀ ಪಾಟೀಲ್, ಕೆ.ದೇವೇಂದ್ರಪ್ಪ, ಸೌಗಂಧಿಕಾ, ಯಮುನಾ ರಂಗೇಗೌಡ, ಎಚ್.ಪಿ.ಗಿರೀಶ್, ಮಧು, ಚೇತನ್​ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net