ಬೀದಿಗಳಲ್ಲಿನ್ನು ಎಲ್ಇಡಿ ಬೆಳಕು, ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಲಾಡ್ ಭರವಸೆ

IMG_20240108_204222_413.jpg
Published on

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರವು ಕೆಲವೇ ದಿನಗಳಲ್ಲಿ ಎಲ್ಇಡಿ ದೀಪಗಳಿಂದ ಕಂಗೊಳಿಸಲಿದೆ. ಮಹಾನಗರದ ಎಲ್ಲ ಬೀದಿದೀಪಗಳನ್ನು ವಿದ್ಯುತ್ ಉಳಿತಾಯಕ್ಕೆ ನೆರವಾಗುವ ದೀಪಗಳಿಗೆ ಬದಲಾಯಿಸುವ ಕಾರ್ಯ ಶ್ರೀಘ್ರ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದ್ದಾರೆ.

ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಸೋಮವಾರ ಮಹಾನಗರ ಪಾಲಿಕೆ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅವಳಿನಗರದಲ್ಲಿ ಸುಮಾರು 75 ಸಾವಿರ ಬೀದಿ ದೀಪಗಳಿವೆ. ಅವುಗಳನ್ನು ಎಲ್ಇಡಿಗೆ ಬದಲಾಯಿಸಬೇಕಿದೆ ಎಂದರು.

ಈ ಬಗ್ಗೆ ಈಗಾಗಲೇ ಯೋಜನೆ ರೂಪಿಸಿದ್ದರೂ ಜಾರಿಯಾಗಿಲ್ಲ. ಎಲ್ಇಡಿ ಬಲ್ಬ್ಗಳಿಂದ ಶೇ. 47 ರಷ್ಟು ವಿದ್ಯುತ್ ಉಳಿಸಬಹುದಾಗಿದೆ. ಬೀದಿದೀಪಗಳ ಅವ್ಯವಸ್ಥೆ ಬಗ್ಗೆ ಹಾಗೂ ಈ ಕುರಿತ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಪಾಲಿಕೆ ಬಿಜೆಪಿ ಸದಸ್ಯ ವೀರಣ್ಣ ಸವಡಿ ಅವರು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಶ್ರೀ ಟೆಂಡರ್ ಕರೆದು ಯೋಜನೆ ಕಾರ್ಯಗತಗೊಳಿಸಲು ಅಧಿಕಾರಿಗಳಿಗೆ ಸೂಚಿಸುವ ಭರವಸೆ ನೀಡಿದರು.

ಡಂಪಿಂಗ್ ಯಾರ್ಡ್ ಸಮಸ್ಯೆ:
ಕಾರವಾರ ರಸ್ತೆ ಹಾಗೂ ಧಾರವಾಡದ ಹೊಸಯಲ್ಲಾಪುರದಲ್ಲಿ ಕಸದ ಗುಡ್ಡೆಗಳು ನಿರ್ಮಾಣವಾಗಿವೆ. ಇವುಗಳನ್ನು ಕರಗಿಸಲು ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಬೇಕು. ಹುಬ್ಬಳ್ಳಿಯಲ್ಲಿ 5 ಲಕ್ಷ ಟನ್, ಧಾರವಾಡದಲ್ಲಿ 2.5 ಲಕ್ಷ ಟನ್ ಕಸದ ಸಂಗ್ರಹವಾಗಿದ್ದು, ದೊಡ್ಡ ಗುಡ್ಡಗಳಾಗಿ ಪರಿಣಮಿಸಿವೆ. ದೊಡ್ಡ ಜಾಗವನ್ನು ಆಕ್ರಮಿಸಿವೆ ಎಂದು ಸದಸ್ಯರು ಗಮನ ಸೆಳೆದರು.

ಕಸದ ಗುಡ್ಡವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಇದರಿಂದ ಜಾಗವೂ ಉಳಿಯಲಿದೆ. ಬೆಂಕಿ ಹಚ್ಚುವುದರಿಂದ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಒಂದು ವಾರದಲ್ಲಿ ಕಸದ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕಿ ಎಂದು ಸಚಿವರು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಸಲು ಹೊಸ ಸಭಾಂಗಣ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು. 82 ಪಾಲಿಕೆ ಸದಸ್ಯರು, ಸಾರ್ವಜನಿಕರು, ಮಾಧ್ಯಮದವರು, ಅಧಿಕಾರಿಗಳು ಕುಳಿತುಕೊಳ್ಳಲು ಅವಕಾಶವಾಗುವಂತೆ ದೊಡ್ಡ ಸಭಾಂಗಣ ಅಗತ್ಯವಾಗಿದೆ. ಈ ಬಗ್ಗೆ ಈಗಾಗಲೇ ಒಂದು ಯೋಜನೆ ರೂಪಿಸಿ ಸರ್ಕಾರಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಯಿತು.

ಹೊಸ ಕಟ್ಟಡವು ಅತ್ಯುತ್ತಮ ಸೌಲಭ್ಯಗಳಿಂದ ಕೂಡಿರಬೇಕು. ಸುಂದರವಾಗಿರಬೇಕು. ಈ ದಿಸೆಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಪಾಲಿಕೆ ಸದಸ್ಯರಿಗೆ ಸಚಿವ ಲಾಡ್ ಭರವಸೆ ನೀಡಿದರು.

ಮಹಾನಗರ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕು. ಇದಕ್ಕಾಗಿ ಜಿಐಎಸ್ ಸರ್ವೇ ಮಾಡಿಸಬೇಕು ಎಂದು ಸದಸ್ಯ ಶಿವು ಹಿರೇಮಠ ಹೇಳಿದರು. ಇದರ ಬಗ್ಗೆ ಗಮನ ಹರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಸರಿಯಾದ ಅನುದಾನ ತಮಗೆ ಹಂಚಿಕೆಯಾಗುತ್ತಿಲ್ಲ. ವಾರ್ಡ್ ಅಭಿವೃದ್ಧಿ ಸಮರ್ಪಕ ಅನುದಾನ ನೀಡಿ ಎಂದು ಕೆಲ ಸದಸ್ಯರು ಮನವಿ ಮಾಡಿದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಬರದ್ವಾಡ, ಉಪಮೇಯರ್ ಸತೀಶ ಹಾನಗಲ್ಲ, ಪ್ರತಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ, ಪಾಲಿಕೆ ಸದಸ್ಯರಾರ ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net