

ಮಂಡ್ಯ: ಒಗ್ಗಟ್ಟಿನ ಮಂತ್ರ, ಸಾಮೂಹಿಕ ನಾಯಕತ್ವದ ಮಾತನ್ನಾಡಿಕೊಂಡೇ ಚುನಾವಣೆ ಸಜ್ಜಾಗುತ್ತಿರುವುದರ ನಡುವೆಯೇ ಜಿಲ್ಲಾ ಬಿಜೆಪಿಗೆ ಉಸ್ತುವಾರಿ ಸಚಿವ ಸ್ಥಾನದ ಬದಲಾವಣೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇದಕ್ಕಿದ್ದಂತೆ ನಡೆದ ಬೆಳವಣಿಗೆಯಿಂದಾಗಿ ಚುನಾವಣಾ ಹೊಸ್ತಿಲಲ್ಲಿ ಗೊಂದಲ ಸೃಷ್ಟಿಸಿದೆ.
ಗುಂಪುಗಾರಿಕೆಯಿಂದಾಗಿ ಸಚಿವ ಆರ್.ಅಶೋಕ್ 18 ದಿನಕ್ಕೆ ಜಿಲ್ಲಾ ಉಸ್ತುವಾರಿಗೆ ಗುಡ್ ಬೈ ಹೇಳಿದ್ದಾರೆ. ಆದರೆ ಹೊಸದಾಗಿ ಜವಾಬ್ದಾರಿ ವಹಿಸಿಕೊಳ್ಳಲು ಯಾವ ಸಚಿವರು ಆಸಕ್ತಿ ತೋರುತ್ತಿಲ್ಲ. ಇದು ಸರ್ಕಾರಕ್ಕೂ ತಲೆಬಿಸಿ ಮಾಡಿದೆ. ಮತ್ತೊಂದೆಡೆ ಜಿಲ್ಲೆಯ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಉಸ್ತುವಾರಿ ಪಟ್ಟಕಟ್ಟಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಮಂಡ್ಯ ಉಸ್ತುವಾರಿಯಾಗಿದ್ದ ಕೆ.ಗೋಪಾಲಯ್ಯ ಅವರನ್ನು ಹಾಸನಕ್ಕೆ ಸೀಮಿತಗೊಳಿಸಿ ಆರ್.ಅಶೋಕ್‌ಗೆ ಮಂಡ್ಯದ ಉಸ್ತುವಾರಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ರಾಜಕೀಯ ಮಾಡುತ್ತಾರೆಂದು ಅಶೋಕ್ ವಿರುದ್ಧ ಸ್ವಪಕ್ಷದ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಒಂದು ಗುಂಪು ಅಶೋಕ್‌ಗೆ ಅದ್ಧೂರಿ ಸ್ವಾಗತ ನೀಡಿದ್ದರೆ, ಮತ್ತೊಂದೆಡೆ ಗೋ ಬ್ಯಾಕ್ ಹೇಳಿಕೆ ಹಾಗೂ ಫೋಸ್ಟ್‌ಗಳನ್ನು ಹರಿಬಿಡುವ ಮೂಲಕ ಮುಜುಗರ ಉಂಟು ಮಾಡಿತ್ತು. ಈ ಮೂಲಕ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ತೋರಿಸಿತ್ತು. ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆ ಎಂಬಂತೆ ಬೇರೆ ಬೇರೆ ಕಾರಣ ಕೊಟ್ಟು ಉಸ್ತುವಾರಿ ಸ್ಥಾನದಿಂದ ಮುಕ್ತವಾಗಿದ್ದಾರೆ. ಆದರೀಗ ಇದು ಸರ್ಕಾರಕ್ಕೆ ಯೋಚನೆ ತರುವಂತೆ ಮಾಡಿದೆ. ಇನ್ನು ಕೆಲವೇ ದಿನದಲ್ಲಿ ಚುನಾವಣೆ ೋಷಣೆಯಾಗುವ ಸಾಧ್ಯತೆ ಇರುವುದರಿಂದ ಜವಾಬ್ದಾರಿ ಹೊರಲು ಸಚಿವರ‌್ಯಾರು ಸಿದ್ಧವಿಲ್ಲ.
ಒಟ್ಟಾರೆ ಹಲವು ಬೆಳವಣಿಗೆ ನಡುವೆ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ಯಾರಿಗೆ ಕೊಡುತ್ತಾರೆನ್ನುವ ಕುತೂಹಲವೂ ಹೆಚ್ಚಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷದೊಳಗೆ ಸ್ವಲ್ಪ ಗೊಂದಲವಿರುವುದರಿಂದ ಅದೆಲ್ಲವನ್ನೂ ಸರಿಪಡಿಸಿ ಗಟ್ಟಿ ಸಂಘಟನೆ ಮಾಡಬೇಕಾದ ಹೊಣೆಗೆ ಯಾರು ಹೆಗಲು ನೀಡುತ್ತಾರೆನ್ನುವುದಕ್ಕೆ ಕೆಲವೇ ದಿನದಲ್ಲಿ ಉತ್ತರ ಸಿಗಲಿದೆ.
ಗೋಪಾಲಯ್ಯಗೆ ಅಸಮಾಧಾನ?: ಸುಮಾರು ಒಂದು ವರ್ಷ ಹಾಸನದ ಜತೆಗೆ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ಕೆ.ಗೋಪಾಲಯ್ಯ ವಹಿಸಿಕೊಂಡಿದ್ದರು. ಈ ಅವಧಿಯಲ್ಲಿ ಹಲವು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಪಕ್ಷ ಸಂಘಟನೆ ಜತೆಗೆ ಮುಖಂಡರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಿದ್ದರು. ಅಂತೆಯೇ ಸರ್ಕಾರದ ಕೆಲಸವನ್ನು ಮಾಡುತ್ತಿದ್ದರು. ಇವರ ಬಗ್ಗೆ ಅಧಿಕಾರಿಗಳ ವಲಯದಲ್ಲಿಯೂ ಉತ್ತಮ ಅಭಿಪ್ರಾಯವಿತ್ತು. ಮಾತ್ರವಲ್ಲದೆ ಸಚಿವ ಕೆ.ಸಿ.ನಾರಾಯಣಗೌಡ ಅವರೊಟ್ಟಿಗೆ ಸೇರಿ ಸರ್ಕಾರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ್ದರು. ಪ್ರಮುಖವಾಗಿ ಮಹಾಕುಂಭಮೇಳ, ದಸರಾ, ಸಂಕೀರ್ತನಾ ಯಾತ್ರೆ ಸೇರಿದಂತೆ ಪಕ್ಷದ ವರ್ಚಸ್ಸು ವೃದ್ಧಿಸುವ ಹಲವು ಕಾರ್ಯಕ್ರಮ ಯಶಸ್ವಿಯಾಗಿದ್ದವು.
ಇದರೊಟ್ಟಿಗೆ ಇತ್ತೀಚೆಗೆ ಕೇಂದ್ರ ಗೃಹಸಚಿವ ಅಮಿತ್ ಷಾ ಜನಸಂಕಲ್ಪ ಯಾತ್ರೆಗೆಂದು ಮಂಡ್ಯಕ್ಕೆ ಆಗಮಿಸಿದ್ದರು. ಆ ಸಮಯದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಾರ್ಯಕ್ರಮಕ್ಕೆ ಸಿಕ್ಕಿತ್ತು. ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಹೆಚ್ಚಿನ ಜನರನ್ನು ಸೇರಿಸಿ ಸಮಾವೇಶ ಮಾಡಲಾಗಿತ್ತು. ಇದರ ಹಿಂದಿನ ನೇತೃತ್ವವನ್ನು ಖುದ್ದು ಗೋಪಾಲಯ್ಯ ಅವರೇ ವಹಿಸಿಕೊಂಡಿದ್ದರು. ಇದಕ್ಕೆ ರಾಷ್ಟ್ರ ನಾಯಕರು ಹಾಗೂ ಸರ್ಕಾರದಿಂದಲೂ ಮೆಚ್ಚುಗೆ ವ್ಯಕ್ತಪಡಿಸಲಾಗಿತ್ತು. ಆದರೆ ಈ ನಡುವೆ ಏಕಾಏಕಿ ಉಸ್ತುವಾರಿ ಬದಲಾವಣೆ ನಿರ್ಧಾರ ಗೋಪಾಲಯ್ಯ ಅವರಿಗೆ ಬೇಸರ ತರಿಸಿದೆ ಎನ್ನುವ ಮಾತು ಪಕ್ಷದ ಅಂಗಳದಲ್ಲಿ ಕೇಳಿಬರುತ್ತಿದೆ.
ಇನ್ನು ಅಶೋಕ್ ಬದಲಾವಣೆಯಾದ ನಂತರ ಗೋಪಾಲಯ್ಯ ಅವರಿಗೆ ಜವಾಬ್ದಾರಿ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ ಅಸಮಾಧಾನಗೊಂಡಿರುವ ಗೋಪಾಲಯ್ಯ ಮತ್ತೆ ಜವಾಬ್ದಾರಿ ಹೊರಲು ಸಿದ್ಧವಿಲ್ಲವೆಂದು ಹೇಳಿದ್ದಾರೆ. ಆದ್ದರಿಂದಲೇ ಉಸ್ತುವಾರಿ ವಹಿಸುವ ಕೆಲಸ ಬಾಕಿ ಉಳಿಯುತ್ತಿದೆ ಎನ್ನಲಾಗುತ್ತಿದೆ.
ಕೆಸಿಎನ್‌ಗೂ ಇಷ್ಟವಿಲ್ಲ: ಸಚಿವರಿಗೆ ಸ್ವಂತ ಜಿಲ್ಲೆಯ ಉಸ್ತುವಾರಿ ವಹಿಸುವುದು ಬೇಡವೆನ್ನುವೆಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಶಾಸಕರೂ ಆದ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೆ ಶಿವಮೊಗ್ಗದ ಜವಾಬ್ದಾರಿ ನೀಡಲಾಗಿತ್ತು. ಅದರಂತೆ ಅವರು ಕೂಡ ತಮ್ಮ ಕ್ಷೇತ್ರ ಹಾಗೂ ಶಿವಮೊಗ್ಗದ ಕಡೆ ಗಮನಹರಿಸಿದರು. ಆದರೀಗ ಉಸ್ತುವಾರಿ ವಹಿಸಿಕೊಳ್ಳುವಂತೆ ನಾಯಕರು ಸಲಹೆ ನೀಡುತ್ತಿದ್ದರೂ ಅದನ್ನು ಅವರು ನಯವಾಗಿಯೇ ತಿರಸ್ಕರಿಸಿದ್ದಾರೆಂದು ತಿಳಿದುಬಂದಿದೆ. ಕಾರಣ, ಕೆಲವೇ ತಿಂಗಳಷ್ಟೇ ಚುನಾವಣೆಗೆ ಬಾಕಿ ಇದೆ. ಹೀಗಿರುವಾಗ ಕಡಿಮೆ ಅವಧಿಯಲ್ಲಿ ಪಕ್ಷ ಸಂಘಟನೆ ಜತೆಗೆ ಎರಡು ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ.
ಹೊಣೆಗಾರಿಕೆಯ ಆತಂಕ?: ವಿರೋಧದ ನಡುವೆಯೂ ಉಸ್ತುವಾರಿ ವಹಿಸಿಕೊಂಡಿದ್ದ ಅಶೋಕ್ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಕರಾತ್ಮಕ ಫಲಿತಾಂಶ ಬಂದರೆ ಹೊಣೆ ಹೊತ್ತು ಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಈ ಹಿನ್ನೆಲೆಯಲ್ಲಿ ಜವಾಬ್ದಾರಿಯಿಂದ ಹೊರಬಂದಿರಬಹುದೆನ್ನುವ ಮಾತು ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಹೊಸದಾಗಿ ಹೊಣೆ ಹೊರಬೇಕಾದವರೂ ಇಂತಹ ಸವಾಲು ಎದುರಿಸಲೇಬೇಕಾದ ಅನಿವಾರ್ಯತೆ ಇದೆ.
ಚುನಾವಣೆ ಜತೆಗೆ ೆಬ್ರವರಿ ಅಂತ್ಯ ಅಥವಾ ಮಾರ್ಚ್‌ನಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬರಲಿದ್ದಾರೆ. ಈ ಸಮಯದಲ್ಲಿ ಮಂಡ್ಯದಲ್ಲಿ ಸಮಾವೇಶ ನಡೆಯಲಿದೆ ಎನ್ನಲಾಗುತ್ತಿದ್ದು, ಇದನ್ನು ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ಹೊಸ ಉಸ್ತುವಾರಿ ಸಚಿವರ ಮೇಲಿರಲಿದೆ. ಮಾತ್ರವಲ್ಲದೆ ಬಿಜೆಪಿ ಈ ಚುನಾವಣೆಯಲ್ಲಿ ಹಳೇ ಮೈಸೂರು ಭಾಗವನ್ನು ಗಂಭೀರವಾಗಿ ಪರಿಗಣಿಸಿದೆ. ಅಂತೆಯೇ ಜಿಲ್ಲೆಯಲ್ಲಿಯೂ ಹೆಚ್ಚು ಸ್ಥಾನ ಗೆಲ್ಲಲೇಬೇಕೆನ್ನುವ ಗುರಿ ಹೊಂದಿರುವುದರಿಂದ ಅದಕ್ಕೆ ತಕ್ಕಂತೆ ತಂತ್ರಗಾರಿಕೆ ನಡೆಯಬೇಕಿದೆ. ಇದು ಉಸ್ತುವಾರಿ ಸಚಿವರ ಹೊಣೆಯಾಗಲಿದೆ.