

ಗೋಣಿಕೊಪ್ಪಲು: ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲುವಿನ ಇಂಚರ ಕೊಡಗು ತಂಡ ಹಾಗೂ ಎಂಟಿಎಫ್‌ಸಿ ನಡುವೆ ನಡೆದ ಫೈನಲ್ ಪಂದ್ಯಾವಳಿ ರೋಚಕವಾಗಿತ್ತು.
2 ಬಲಿಷ್ಠ ತಂಡಗಳು ತೀವ್ರ ಸೆಣಸಾಟ ನಡೆಸಿದವು. ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ಮೂಲಕ ಯಶಸ್ವಿ 4ನೇ ವರ್ಷದ ಚಾಂಪಿಯನ್‌ಷಿಪ್ ಆಗಿ ಕೊಡಗು ಇಂಚರ ತಂಡ ಹೊರಹೊಮ್ಮಿತು. ಎಂಟಿಎಫ್‌ಸಿ ತಂಡವನ್ನು 24-18 ಸ್ಕೋರ್‌ಗಳ ಅಂತರದಿಂದ ಸೋಲಿಸಿ ಈ ಬಾರಿಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ಮೂಲಕ ಶಿವಾಜಿ ಯುವ ಸೇನೆಯ 4ನೇ ವರ್ಷದ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ವಿಜೇತ ತಂಡಕ್ಕೆ 50 ಸಾವಿರ ರೂ.ನಗದು, ದ್ವಿತೀಯ ಸ್ಥಾನ ಪಡೆದ ಎಂಟಿಎಫ್‌ಸಿ ತಂಡಕ್ಕೆ 30 ಸಾವಿರ ರೂ. ನಗದು ಹಾಗೂ ಪಾರಿತೋಷಕವನ್ನು ನೀಡಲಾಯಿತು.
ಉಳಿದಂತೆ 3ನೇ ಹಾಗೂ 4ನೇ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಮಯೂರ ವಾರಿಯರ್ಸ್ ಹಾಗೂ 7 ಸ್ಟಾರ್ ಸಿದ್ದಾಪುರ ತಂಡದ ನಡುವೆ ಸೆಣಸಾಣ ನಡೆಸಿತು. ಮಯೂರ ವಾರಿಯರ್ಸ್ ತಂಡ 3ನೇ ಸ್ಥಾನ ಹಾಗೂ 7 ಸ್ಟಾರ್ ಸಿದ್ದಾಪುರ ತಂಡ 4ನೇ ಸ್ಥಾನ ಪಡೆಯಿತು. ಗೋಣಿಕೊಪ್ಪ ಬುಲ್ಸ್ ತಂಡವು ಉತ್ತಮ ಟೀಮ್ ಪ್ರಶಸ್ತಿಗೆ ಭಾಜನವಾಯಿತು. ತೀವ್ರ ಹಣಾಹಣಿಯಿಂದ ಕೂಡಿದ್ದ ಫೈನಲ್ ಪಂದ್ಯಾಟವನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳು ಮೈದಾನದಲ್ಲಿ ಕಿಕ್ಕಿರಿದು ಸೇರಿದ್ದರು.
47ನೇ ವರ್ಷದ ಶ್ರೀ ಕಾವೇರಿ ದಸರಾ ಸಮಿತಿಯ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ಗೋಣಿಕೊಪ್ಪ ಶಿವಾಜಿ ಸೇನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಒಕ್ಕೂಟ ಪೊನ್ನಂಪೇಟೆ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪ್ರೊ ಕಬಡ್ಡಿ ಮಾದರಿಯ ಗ್ರಾಮೀಣ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಹಲವು ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದರು. ಶಿವಾಜಿ ಯುವ ಸೇನೆಯ ಅಧ್ಯಕ್ಷ ಎಲ್.ಎನ್.ಅಣ್ಣಪ್ಪ ಅಧ್ಯಕ್ಷತೆಯಲ್ಲಿ 2 ದಿನಗಳ ಕಾಲ ನಡೆದ ಲೀಗ್ ಮಾದರಿಯ ಗ್ರಾಮೀಣ ಕಬಡ್ಡಿ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಭಾಗದಿಂದ 8 ತಂಡಗಳು ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಕಳೆದ 4 ವರ್ಷಗಳಿಂದ ಗ್ರಾಮೀಣ ಕ್ರೀಡೆಗೆ ಶಿವಾಜಿ ಸೇನೆ ಉತ್ತಮ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. ಮುಂದೆಯೂ ಉತ್ತಮ ಕ್ರೀಡಾಕೂಟಗಳನ್ನು ಆಯೋಜಿಸುವಂತೆ ಕರೆ ನೀಡಿದರು.
ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಆಫೀಸರ್ ತೀತಿರ ರೋಷನ್ ಅಪ್ಪಚ್ಚು ಮಾತನಾಡಿ, ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಕಬಡ್ಡಿ ಕ್ರೀಡೆಗಳಿಂದ ದೈಹಿಕವಾಗಿ ಸದೃಢವಾಗಬಹುದು. ಹೊನಲು ಬೆಳಕಿನ ಕ್ರೀಡೆ ನಡೆಸುವುದು ಸುಲಭದ ಮಾತಲ್ಲ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸಿದ್ದಲ್ಲಿ ಸಾಕಷ್ಟು ಪ್ರತಿಭೆಗಳು ಗ್ರಾಮೀಣ ಮಟ್ಟದಿಂದ ಹೊರಹೊಮ್ಮಲಿದೆ. ಈ ನಿಟ್ಟಿನಲ್ಲಿ ಆಯೋಜಕರು ಉತ್ತಮ ರೀತಿಯಲ್ಲಿ ಕ್ರೀಡೆಗಳನ್ನು ಹೆಚ್ಚು ನಡೆಸುವಂತಾಗಲಿ ಎಂದರು.
ಸಮಿತಿ ಅಧ್ಯಕ್ಷ ಎಲ್.ಎನ್.ಅಣ್ಣಪ್ಪ ಮಾತನಾಡಿದರು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅತಿಥಿಗಳು ಸನ್ಮಾನಿಸಿದರು. ದಾನಿಗಳಾದ ತೀತಿರ ರೋಶನ್ ಅಪ್ಪಚ್ಚು ಹಾಗೂ ಅಜ್ಜಿಕುಟ್ಟಿರ ಸಜನ್ ಚಂಗಪ್ಪ ಅವರನ್ನು ಶಿವಾಜಿ ಸೇನೆ ವತಿಯಿಂದ ಸನ್ಮಾನಿಸಲಾಯಿತು. ಮುಂಜಾನೆ 5 ಗಂಟೆವರೆಗೂ ಹೊನಲು ಬೆಳಕಿನಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಿತು.
ಕಾಪ್ಸ್ ವಿದ್ಯಾಸಂಸ್ಥೆ ಪಬ್ಲಿಕ್ ರಿಲೇಷನ್‌ಷಿಪ್ ಆಫೀಸರ್ ಅಣ್ಣಳಮಾಡ ಮಾನಸ ತಿಮ್ಮಯ್ಯ, ಗೋಣಿಕೊಪ್ಪಲುವಿನ ಎಲ್‌ಎಂಸಿ ಆಸ್ಪತ್ರೆಯ ವೈದ್ಯೆ ಡಾ.ಅಮೃತ್ ನಾಣಯ್ಯ, ಸಮಿತಿ ಗೌರವ ಅಧ್ಯಕ್ಷ ಕೊಲ್ಲಿರ ಗಯಾ ಕಾವೇರಪ್ಪ, ಗೋಣಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ(ಮಂಜು), ಜಯಲಕ್ಷ್ಮೀ ಜ್ಯುವೆಲ್ಲರಿ ಮಾಲೀಕರಾದ ಎಂ.ಎಂ.ನಾಗೇಶ್, ನಾಗಲಕ್ಷ್ಮೀ ಜ್ಯುವೆಲ್ಲರಿ ಮಾಲೀಕ ಎಂ.ಜಿ.ನಾಗರಾಜ್, ಎಂ.ಎನ್.ಯೋಗೇಶ್, ಮಹಾಲಕ್ಷ್ಮೀ ಜ್ಯುವೆಲ್ಲರಿಯ ಎಂ.ಜಿ.ಕಾಂತರಾಜ್, ಅರುವತ್ತೋಕ್ಕಲು ಗ್ರಾ.ಪಂ.ಸದಸ್ಯ ಅಜ್ಜಿಕುಟ್ಟಿರ ಸಜನ್ ಚಂಗಪ್ಪ, ಕೂರ್ಗ್ ಚಿಕನ್ ಸೆಂಟರ್ ಮಾಲೀಕ ಸಿದ್ದರಾಜು, ಉದ್ಯಮಿ ಗಣೇಶ್‌ರೈ ಇತರರು ಇದ್ದರು.