

ಕಡೂರು: ದಸರಾ ರಜೆಯನ್ನು ಸದುಪಯೋಗ ಪಡಿಸಿಕೊಂಡಿರುವ ಪಟ್ಟಣದ 6ನೇ ತರಗತಿ ವಿದ್ಯಾರ್ಥಿನಿ ಎಂ.ಇಂಚರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗೊಂಬೆ ಚಿತ್ರಕ್ಕೆ ಬಣ್ಣಗಳನ್ನು ತುಂಬುವ ಮೂಲಕ ಗಾಂಧಾರಿ ವಿದ್ಯೆ ಪ್ರದರ್ಶಿಸಿ ಅಚ್ಚರಿ ಮೂಡಿಸಿದಳು.
ಕಡೂರು ಪಟ್ಟಣದ ಮೋಹನ್ ಹಾಗೂ ವಿನುತಾ ದಂಪತಿಯ ಪುತ್ರಿ ಇಂಚರ ದಸರಾ ರಜೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಪಂಚತಂತ್ರ ಗುರುಕುಲಂ ಎಂಬ ಸಂಸ್ಥೆ ಯೋಗ ವಿದ್ಯಾಶ್ರಮದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಒಂದು ವಾರ ಗಾಂಧಾರಿ ವಿದ್ಯೆ ತರಬೇತಿ ಪಡೆದು ಅದನ್ನು ತನ್ನ ಶಾಲೆಯಲ್ಲಿ ಪ್ರದರ್ಶಿಸಿ ವಿದ್ಯಾರ್ಥಿಗಳು ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಗಮನಸೆಳೆದಿದ್ದಾಳೆ.
ಗುರುವಾರ ಶಾಲೆ ಕಚೇರಿಯಲ್ಲಿ ಈ ಕಲೆ ಪ್ರದರ್ಶನದ ವೇಳೆ ಬಣ್ಣದ ಪೆನ್ಸಿಲ್ ಮತ್ತು ವರ್ಣ ಚಿತ್ರಗಳ ಪುಸ್ತಕದೊಡನೆ ಹಾಜರಾದ ಇಂಚರ ಕಣ್ಣು ಕಟ್ಟಿಕೊಂಡು ಪುಸ್ತಕದಲ್ಲಿರುವ ಗೊಂಬೆ ಚಿತ್ರಕ್ಕೆ ಮಾದರಿಯಾಗಿ ಬಣ್ಣ ತುಂಬಲು ಸಿದ್ಧಳಾದಳು. ಬಣ್ಣದ ಪೆನ್ಸಿಲ್‌ಗಳನ್ನು ಹರಡಿ ಕಣ್ಣು ಕಟ್ಟಿಕೊಂಡು ತೆರೆದ ಪುಸ್ತಕದ ಮೇಲೆ ಕೈಯಾಡಿಸಿ ಪಕ್ಕದಲ್ಲಿದ್ದ ಬಣ್ಣದ ಪೆನ್ಸಿಲ್ ತೆಗೆದುಕೊಂಡು ಪಕ್ಕದ ಚಿತ್ರದಲ್ಲಿ ಇವಂತೆ ಚಾಚೂ ತಪ್ಪದೆ ಬಣ್ಣ ತುಂಬಿದಳು. ಅದೇ ರೀತಿ 10 ನಿಮಿಷಗಳಲ್ಲಿ ಇಡೀ ಪುಟದಲ್ಲಿ ಮಾದರಿಯಲ್ಲಿರುವ ಂತೆ ಬಣ್ಣ ತುಂಬಿ ಚಿತ್ರವನ್ನು ವರ್ಣಮಯಗೊಳಿಸಿದಳು.
ನಾನು ದಾಂಡೇಲಿಯಲ್ಲಿ ಪಂಚತಂತ್ರ ಗುರುಕುಲಂ ಎಂಬ ಸಂಸ್ಥೆ ಯೋಗ ವಿದ್ಯಾಶ್ರಮದಲ್ಲಿ ಒಂದು ವಾರ ಕಾಲ ತರಬೇತಿ ಪಡೆದಿದ್ದೇನೆ ಎಂದು 6ನೇ ತರಗತಿ ವಿದ್ಯಾರ್ಥಿನಿ ಎಂ.ಇಂಚರ ತಿಳಿಸಿದರು. 1ರಿಂದ 10ನೇ ತರಗತಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿತು ತಮಗೆ ಇಷ್ಟವಾದ ಚಟುವಟಿಕೆ, ಆಟಗಳನ್ನು ಪ್ರದರ್ಶಿಸಬಹುದು. ಚೆಸ್, ಕೇರಂ, ಸೈಕಲ್ ಹೊಡೆಯುವುದು ಹೀಗೆ ಹಲವಾರು ವಿಭಾಗಗಳಿವೆ. ನನಗೆ ಚಿತ್ರಕಲೆ ಇಷ್ಟದ ವಿಷಯವಾಗಿದ್ದರಿಂದ ನಾನು ಈ ವಿಷಯ ಆರಿಸಿಕೊಂಡಿದ್ದೆ. ಚಿತ್ರದ ಮೇಲ್ಭಾಗದಲ್ಲಿ ಕೈ ಆಡಿಸಿದಾಗ ಅದು ಸ್ಕ್ಯಾನ್ ರೀತಿ ವರ್ತಿಸುತ್ತದೆ. ಚಿತ್ರದ ಮೇಲೆ ಕೈ ಇಟ್ಟಾಗ ಎಲ್ಲಿ ಯಾವ ಬಣ್ಣ ತುಂಬಿಲ್ಲ ಎನ್ನುವುದು ಅರಿವಿಗೆ ಬರುತ್ತದೆ ವಾಸನೆ ಮೂಲಕ ಗ್ರಹಿಸಿದರೆ ಇದು ಯಾವ ಬಣ್ಣ ಎಂದು ತಿಳಿಯುತ್ತದೆ. ಅದನ್ನು ಬಳಸಿ ವಿದ್ಯೆ ಪ್ರದರ್ಶಿಸಿದೆ. ಯೋಗ, ಮಂತ್ರಗಳ ಬೋಧನೆ ಮೂಲಕ ಈ ವಿದ್ಯೆಗೆ ಚಾಲನೆ ನೀಡಿ ಹಂತ ಹಂತವಾಗಿ ಕಲಿಸಿಕೊಟ್ಟಿದ್ದರು ಎಂದು ತಿಳಿಸಿದರು.