

ಉಪ್ಪಿನಬೆಟಗೇರಿ: ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿರುವ ವಿಜಯಪೂರ ಜಿಲ್ಲೆಯ ಚಡಚಣ ತಾಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠವು ಜಾತ್ಯಾತೀತ ಪರಂಪರೆಯ ಅಧ್ಯಾತ್ಮ ಕೇಂದ್ರ ಸ್ಥಾನವಾಗಿದೆ ಎಂದು ಇಂಚಗೇರಿ ಮಠದ ಶಿಷ್ಯ ದೊಡವಾಡ ಗ್ರಾಮದ ಶಂಕ್ರಪ್ಪ ಮಹಾರಾಜರು ಹೇಳಿದರು.
ಗುರುವಾರ ಹುಬ್ಬಳ್ಳಿ ನಗರದಿಂದ ಗ್ರಾಮಕ್ಕೆ ಆಗಮಿಸಿದ ಕ್ಷೇತ್ರ ಇಂಚಗೇರಿ ಮಠಕ್ಕೆ ತೆರಳುವ ದಿಂಡಿ ಪಲ್ಲಕ್ಕಿ ಪಾದಯಾತ್ರಿಕರ ಸ್ವಾಗತ ಹಾಗೂ ಧಾರ್ವಿುಕ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಇಂಚಗೇರಿ ಮಠದಲ್ಲಿ ಜ. 30 ರಿಂದ ಫೆ. 2ರವರೆಗೆ ಜರುಗುವ ಶ್ರೀ ಭಾವುಸಾಹೇಬ ಮಹಾರಾಜರ, ಗಿರಿಮಲ್ಲೇಶ್ವರ, ಗುರುಪುತ್ರೇಶ್ವರ, ಐನಾಥಪ್ರಭು ಹಾಗೂ ಜಗನ್ನಾಥ ಮಹಾರಾಜರ ಪುಣ್ಯತಿಥಿ ಸಪ್ತಾಹದಲ್ಲಿ ಪಾಲ್ಗೊಳ್ಳಲೆಂದು ರಾಜ್ಯದ ವಿವಿಧ ಭಾಗದ ಸುಮಾರು 80 ಜನರು ಪಾದಯಾತ್ರೆ ಕೈಗೊಂಡಿದ್ದಾರೆ.
ಮನಗುಂಡಿಯ ಸುಭಾಸ ಮಹಾರಾಜರು ಮಾತನಾಡಿ, ಇಂಚಗೇರಿ ಮಠಕ್ಕೆ ಜಾತಿ, ಧರ್ಮ ಎಂಬುವುದಿಲ್ಲ. ಶ್ರೀಮಠದ 7ನೇ ಪೀಠಾಧಿಪತಿಯಾಗಿದ್ದ ಶ್ರೀ ಮಾಧವಾನಂದರು 18 ಸಾವಿರಕ್ಕೂ ಅಧಿಕ ಅಂತರ್ಜಾತಿ ವಿವಾಹ ಕೈಗೊಳ್ಳುವ ಮೂಲಕ ಭಕ್ತರನ್ನು ಜಾತ್ಯಾತೀತ ಪರಂಪರೆಗೆ ಹೊಂದಿಕೊಳ್ಳುವಂತೆ ಪ್ರೇರೇಪಿಸಿದರು. ಪ್ರಸ್ತುತ ಪೀಠಾಧಿಪತಿಗಳಾಗಿ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು ಶ್ರೀಮಠವನ್ನು ಮುನ್ನಡೆಸುತ್ತಿದ್ದು, ಅವರ ನೇತೃತ್ವದಲ್ಲಿ ಸಾಮೂಹಿಕ ವಿವಾಹ, ಬೇಸಾಯಗಳು ಸೇರಿ ಎಲ್ಲ ಧಾರ್ವಿುಕ ಕಾರ್ಯಕ್ರಮಗಳು ಜರುಗುತ್ತಿವೆ ಎಂದರು.
ಶಂಕರ ಓರಣಕರ, ಪತ್ರಕರ್ತರಾದ ಶಿವಪ್ರಭು ಈಸರಗೊಂಡ, ಶ್ರೀಶೈಲ್ ಗೌರಿಮಠ, ಪ್ರಕಾಶ ಹೂಗಾರ, ಪ್ರವೀಣ ಓಂಕಾರಿ, ರಮೇಶ ಓರಣಕರ ಹಾಗೂ ವಿನೋಬಾ ಓರಣಕರ, ಕಮಲಾಬಾಯಿ ಓರಣಕರ, ಭಾಗ್ಯಶ್ರೀ ಈಸರಗೊಂಡ, ಆದಿತ್ಯ ಈಸರಗೊಂಡ, ಸಾವಿತ್ರಿ ಓರಣಕರ, ರೂಪಾ ಈಸರಗೊಂಡ, ಶಿವಲೀಲಾ ಮುರಗೋಡ, ರವೀಂದ್ರ ಮಡಿವಾಳರ, ರವೀಂದ್ರ ಓರಣಕರ, ಅಸ್ಲಂ ಮುಲ್ಲಾ, ಉಳವಪ್ಪ ಕೋಟೂರ, ಇತರರು ಉಪಸ್ಥಿತರಿದ್ದರು.