ಅಡ್ಡಪಲ್ಲಕ್ಕಿ ಮೆರವಣಿಗೆಯೊಂದಿಗೆ ಶ್ರೀಗಳ ಅಂತ್ಯಕ್ರಿಯೆ

Horti 25-1
Published on

ಹೊರ್ತಿ: ಇಂಚಗೇರಿ ಕರಬಸವ ಹಿರೇಮಠದ ಪೀಠಾಧಿಪತಿ ಡಾ.ರೇಣುಕ ಶಿವಯೋಗಿ ಶಿವಾಚಾರ್ಯರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 1.30 ಗಂಟೆಗೆ ಮಠದ ಆವರಣದಲ್ಲಿ ನಡೆಯಿತು.
ಎಲ್ಲ ಪಟ್ಟದೇವರು ಸಾನ್ನಿಧ್ಯ ವಹಿಸಿದ್ದರು. ರಾಜಕೀಯ ಮುಖಂಡರು ಹಾಗೂ ಅಸಂಖ್ಯಾತ ಭಕ್ತ ಸಮೂಹದ ಸಮ್ಮುಖದಲ್ಲಿ ವಿಧಿವಿಧಾನಗಳೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಲಾಯಿತು.
ವಿವಿಧ ಗ್ರಾಮಗಳಿಂದ ಆಗಮಿಸಿದ ಭಜನಾ ತಂಡಗಳಿಂದ ಇಡೀ ರಾತ್ರಿ ಶಿವಭಜನೆ ಜರುಗಿತು. ಬೆಳಗ್ಗೆ ಭಕ್ತರಿಗೆ ಶ್ರೀಗಳ ಪಾರ್ಥಿವ ಶರೀರದ ದರ್ಶನ ಕಲ್ಪಿಸಲಾಯಿತು. 10 ಗಂಟೆಗೆ ಸಕಲ ವಾದ್ಯಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಹೂಗಳಿಂದ ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಮಾರ್ಗ ಮಧ್ಯದಲ್ಲಿ ಸುಮಂಗಲೆಯರು ಆರತಿ ಎತ್ತಿ ಅಂತಿಮ ದರ್ಶನ ಪಡೆದರು.
ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಶ್ರೀಗಳ ಅಗಲಿಕೆಯಿಂದ ಮಠಕ್ಕೆ ತುಂಬಲಾರದ ನಷ್ಟವಾಗಿದೆ. ನೇರ, ನಿಷ್ಠುರ ವಾಕ್‌ಸಿದ್ಧಿಗಳಿಂದ ಪ್ರಸಿದ್ಧರಾದ ಶ್ರೀಗಳು, ಅಸಂಖ್ಯಾತ ಭಕ್ತರನ್ನು ಬಿಟ್ಟು ಅಗಲಿರುವರು. ಅವರಿಗೆ ಪರಮಾತ್ಮ ಚಿರಶಾಂತಿ ನೀಡಲಿ ಎಂದು ನಾವೆಲ್ಲ ಪ್ರಾರ್ಥಿಸೋಣ ಎಂದರು.
ಎಂ.ಆರ್. ಪಾಟೀಲ, ಶ್ರೀಮಂತ ಇಂಡಿ, ಅಣ್ಣಪ್ಪ ಖೈನೂರ, ವಿಠಲ ಕಟಕಧೊಂಡ, ರವಿಕಾಂತ ಪಾಟೀಲ, ವಿಲಾಸ ರಾಠೋಡ, ಸುನೀಲ ರಾಠೋಡ, ಬಾಬು ಚವಾಣ್, ರವಿದಾಸ ಜಾಧವ, ಮಲ್ಲಪ್ಪ ಸಕ್ರಿ, ಭೀಮರಾಯಗೌಡ ಬಿರಾದಾರ, ನೀಲಪ್ಪಗೌಡ ಬಿರಾದಾರ, ಎಲ್.ಎನ್. ನಿಂಬರಗಿಮಠ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net