ಸತತ ಮಳೆಗೆ ಕೊಳೆಯುತ್ತಿದೆ ಈರುಳ್ಳಿ ಬೆಳೆ

Rain Effect Onion Seeds Dirt
ತಂಬ್ರಹಳ್ಳಿಯಲ್ಲಿ ರೈತ ಮಂಜುನಾಥ ಪಟ್ಟಣಶೆಟ್ಟಿ ಅವರ ಜಮೀನಿನಲ್ಲಿ ಈರುಳ್ಳಿ ಬೆಳೆ ಕೊಳೆರೋಗಕ್ಕೆ ತುತ್ತಾಗಿರುವುದು.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಬೆಳೆದಿರುವ ಹಾಗೂ ಕಟಾವು ಮಾಡಲಾದ ಈರುಳ್ಳಿ ಕೊಳೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ತಾಲೂಕಿನಲ್ಲಿ ಮುಂಗಾರು ಬೆಳೆಯಾದ ಈರುಳ್ಳಿ 1261 ಎಕರೆಯಲ್ಲಿ ಬೆಳೆಯಲಾಗಿದೆ. ಪ್ರಮುಖವಾಗಿ ಬನ್ನಿಗೋಳ, ಮುತ್ಕೂರು, ತಂಬ್ರಹಳ್ಳಿ, ಕಿತ್ನೂರು, ರಾಮೇಶ್ವರಬಂಡಿ, ಕನ್ನಿಹಳ್ಳಿ, ಮಾದೂರು, ಏಣಿಗಿ ಹಾಗೂ ನೆಲ್ಕುದ್ರಿ ಗ್ರಾಮಗಲ್ಲಿ ಉತ್ತಮ ಫಸಲು ಬಂದಿದೆ.

ಅದರಲ್ಲೂ ಬಹುತೇಕ ರೈತರು ಹೆಚ್ಚಾಗಿ ಅರ್ಧ ಅಥವಾ ಒಂದೆರಡು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ಶೇ.60ಕ್ಕಿಂತ ಹೆಚ್ಚು ಕಟಾವು ಮಾಡಲಾಗಿದೆ. ಈಗ ಶೇ.30ಕ್ಕೂ ಹೆಚ್ಚು ಬೆಳೆ ಕೊಯ್ಲು ಮಾಡಬೇಕಿದೆ. ನಿರಂತರ ಮಳೆಯಿಂದಾಗಿ ಬೆಳೆ ಕೊಳೆರೋಗಕ್ಕೆ ತುತ್ತಾಗುತ್ತಿದೆ. ಇನ್ನೂ ಕೆಲವೆಡೆ ಕಟಾವು ಮಾಡಿಟ್ಟಿರುವ ಸ್ಥಳದಲ್ಲಿಯೇ ಈರುಳ್ಳಿ ಕೊಳೆಯುತ್ತಿದೆ. ಇದರಿಂದ ರೈತರಿಗೆ ನಷ್ಟದ ಭೀತಿ ಎದುರಾಗಿದೆ.

ತಾಲೂಕಿನಲ್ಲಿ ಈರುಳ್ಳಿ ಬೆಳೆಗಾರರ ಪೈಕಿ ಕೇವಲ 11 ಜನ ಬೆಳೆವಿಮೆ ಮಾಡಿಸಿದ್ದಾರೆ. ರೈತರು ಜುಲೈಯೊಳಗೆ ಬೆಳೆಹಾನಿ ವಿಮೆ ಮಾಡಿಸಿದ್ದರೆ ಪರಿಹಾರಕ್ಕೆ ಅರ್ಹರಾಗುತ್ತಿದ್ದರು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. ಇನ್ನೂ ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದ, ನಷ್ಟದ ಮೊತ್ತದ ಗೊತ್ತಾಗಲಿದೆ.

ಪ್ರತಿ ವರ್ಷ ಈರುಳ್ಳಿ ಬೆಳೆಯುತ್ತೇವೆ. ಒಂದು ಎಕರೆಗೆ ಕನಿಷ್ಠ 50 ಸಾವಿರ ರೂ.ಗೂ ಅಧಿಕ ಖರ್ಚು ಬರುತ್ತದೆ. ಈ ವರ್ಷ ಇಳುವರಿ ಕಡಿಮೆಯಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ನಿರಂತರ ಮಳೆಯಿಂದ ಕಟಾವಿಗೆ ಬಂದ ಬೆಳೆ ಕೊಳೆಯುತ್ತಿದೆ. ಅಧಿಕಾರಿಗಳು ಸರ್ವೇ ಮಾಡಿ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ರೈತ ಮೈನಳ್ಳಿ ಕೊಟ್ರೇಶ್ ಹಾಗೂ ಇತರರು ಒತ್ತಾಯಿಸಿದ್ದಾರೆ.

ಸತತ ಮಳೆಯಿಂದ ಈರುಳ್ಳಿ ಬೆಳೆ ಹೊಲದಲ್ಲಿಯೇ ಕೊಳೆಯುತಿರುವುದು ಗಮನಕ್ಕೆ ಬಂದಿದೆ. ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಲಾಗುವುದು. ಸರ್ವೇ ವರದಿಯನ್ನು ಮೇಲಧಿಕಾರಿಗಳಿಗೆ ಕಳಿಸಿ ಪರಿಹಾರ ವಿತರಣೆಗೆ ಕೋರಲಾಗುವುದು.| ರಾಜೇಂದ್ರ, ಎಡಿ, ತೋಟಗಾರಿಕೆ ಇಲಾಖೆ, ಹಬೊಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net