ಬಿಡದ ಮಳೆಗೆ ಅಪಾರ ಆಸ್ತಿ-ಪಾಸ್ತಿ ಹಾನಿ

24-KLG-1 RAIN
Published on

ಕಲಘಟಗಿ: ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ನಿರಂತರ ಮಳೆಗೆ ತಾಲೂಕಿನ ವಿವಿಧೆಡೆ ಸಾಕಷ್ಟು ಆಸ್ತಿ-ಪಾಸ್ತಿ ಹಾನಿ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಸತತ ಮಳೆಯಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದು, ಬಿತ್ತಿದ ಬೆಳೆಗಳಲ್ಲಿ ಕಸ (ಕಳೆ) ವೇ ಹೆಚ್ಚಾಗಿ ಬೆಳೆ ಕಾಣದಂತಾಗಿದೆ. ತಾಲೂಕಿನ ವಿವಿಧೆಡೆ ನಿರಂತರ ಮಳೆಗೆ ಮನೆಗಳು ಧರೆಗೆ ಉರುಳಿವೆ. ಕುರುವಿನಕೊಪ್ಪ ಗ್ರಾಮದಲ್ಲಿ ಸಾವಕ್ಕ ತವಡೇನವರ ಎಂಬುವವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಭಾನುವಾರ ಬೆಳಗ್ಗೆ 8.30 ವೇಳೆಗೆ ಮನೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯ ಒಂದು ಭಾಗ ಸಂಪೂರ್ಣ ಬಿದ್ದಿದೆ. ಅದೇ ಸಮಯದಲ್ಲಿ ಮಗು ಆಟವಾಡುತ್ತಿದ್ದಾಗ ಮನೆಯವರು ಎತ್ತಿಕೊಂಡು ಹೋಗಿದ್ದಿದ್ದರಿಂದ ದೊಡ್ಡ ಅವಘಡ ತಪ್ಪಿದಂತಾಗಿದೆ.

ತಾಲೂಕಿನ ಎಮ್ಮೆಟ್ಟಿ ಗ್ರಾಮದ ಸಂಜು ದೇಸಾಯಿ ಹಾಗೂ ಶೀಗಿಗಟ್ಟಿ ತಾಂಡಾದ ರಾಮವ್ವ ಲಮಾಣಿ, ಮುತಗಿ ಗ್ರಾಮದ ಮಮತಾ ಪೆಂಡಾರಿ, ದೇವಿಕೊಪ್ಪ ಗ್ರಾಮದ ನಾಗವ್ವ ಹೊಸಮನಿ, ಯಲ್ಲಪ್ಪ ಕಂಬಾರ, ನಾರಾಯಣ ಕಂಬಾರ, ಗಂಗಯ್ಯ ಸಂಬಳದ, ಶೀಗಿಗಟ್ಟಿ ಗ್ರಾಮದ ಪ್ರೇಮವ್ವ ಹುಲಕೊಪ್ಪ, ಹಿರೇಹೊನ್ನಳ್ಳಿ ಗ್ರಾಮದ ಪುಂಡಲೀಕ, ಯಲ್ಲಪ್ಪ ದಾಸನಕೊಪ್ಪ, ತಾವರಗೇರಿ ಗ್ರಾಮದ ಮಂಜುನಾಥ ಬಡಿಗೇರ, ಯಲವದಾಳ ಗ್ರಾಮದ ಮಂಜುನಾಥ ಕಾಮದೇನು, ಮಿಶ್ರಿಕೋಟಿ ಗ್ರಾಮದ ಯಲ್ಲವ್ವ ರಂಗನಾಯಕ, ಗೋಪಾಲ ಜಾಧವ, ಚಳಮಟ್ಟಿ ಗ್ರಾಮದ ಮಾಯವ್ವ ಮಾದರ, ಮಲಕನಕೊಪ್ಪ ಗ್ರಾಮದ ಉಮೇಶ ಗಾಣಿಗೇರ, ತಂಬೂರು ಗ್ರಾಮದ ಮುರಪ್ಪ ಬಂಡಿವಾಡ, ಕಲಘಟಗಿ ಪಟ್ಟಣದ ಮರಯ್ಯ ಮೂಲಿಮಠ ಅವರಿಗೆ ಸೇರಿದಂತೆ ಮನೆಗಳು ಮಳೆಗೆ ಕುಸಿದು ಬಿದ್ದಿವೆ.

ಮನೆಗಳು ಬಿದ್ದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸತತ ಮಳೆ ಸುರಿಯುತ್ತಿದ್ದರೂ ಚಿಕ್ಕ ಮಕ್ಕಳು, ವೃದ್ಧರೊಂದಿಗೆ ಮನೆಯಲ್ಲೇ ವಾಸವಾಗಿದ್ದೇವೆ. ನಮ್ಮ ಗೋಳು ಕೇಳುವವರು ಯಾರು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net