

ತಿ.ನರಸೀಪುರ: ಬನ್ನೂರು ಸಂತೇಮಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ನೆರವಾಗಲು ಸಂಸದ ಸುನೀಲ್ ಬೋಸ್ ಅವರು ತಲಾ 15 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಚನ್ನಕೇಶವ ಹೇಳಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲೂಕಿನ ಬನ್ನೂರು ಪಟ್ಟಣದ ಸಂತೇಮಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದರ ಪ್ರೋತ್ಸಾಹ ಧನವನ್ನು ವಿತರಿಸಿದರು.
ನಂತರ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದಂತೆ ಸುನೀಲ್ ಬೋಸ್ ಅವರು ಪ್ರೋತ್ಸಾಹ ಧನ ನೀಡಿದ್ದಾರೆ. ಸಂಸದರ ವೈಯಕ್ತಿಕ ನೆರವನ್ನು ವ್ಯಾಸಂಗಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸದರ ಆಪ್ತ ಸಹಾಯಕ ಬಸವರಾಜು ಮಾತನಾಡಿ, ಬನ್ನೂರು ಸೇರಿದಂತೆ ತಿ. ನರಸೀಪುರ ಪಟ್ಟಣ ಹಾಗೂ ಮೂಗೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಲು ಸಂಸದರ ಕಾರ್ಯಕ್ರಮ ನಿಗದಿಯಾಗಿತ್ತು. ನಾಡಹಬ್ಬ ದಸರಾ ಆಚರಣೆ ಸಂಬಂಧ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಸುನೀಲ್ ಬೋಸ್ ಕಡ್ಡಾಯವಾಗಿ ಭಾಗವಹಿಸಲೇಬೇಕಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಗೂಳೇಗೌಡ, ಮೈಮುಲ್ ಮಾಜಿ ನಿರ್ದೇಶಕ ಕೇತುಪುರ ಪ್ರಭಾಕರ್, ತಾ.ಪಂ ಮಾಜಿ ಸದಸ್ಯರಾದ ಕುಕ್ಕೂರು ಗಣೇಶ್, ರಾಮಲಿಂಗಯ್ಯ, ಮುಖಂಡರಾದ ಮರಿಗೌಡ, ಅನೂಪ್ ಇತರರು ಇದ್ದರು.