

ತುಮಕೂರು: ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರ ಮೂರು ವರ್ಷದಿಂದ ನೀಡುತ್ತಿದ್ದ ಪ್ರೋತ್ಸಾಹಧನ ‘ರೈತಸಿರಿ’ ಸದ್ದಿಲ್ಲದೆ ಸ್ಥಗಿತಗೊಂಡಿದೆ. ಒಂದು ಹೆಕ್ಟೇರ್‌ನಲ್ಲಿ ಸಿರಿಧಾನ್ಯ ಬೆಳೆದರೆ 10 ಸಾವಿರ ರೂ. ನೀಡುವುದಾಗಿ ಘೋಷಿಸಿದ್ದ ಸರ್ಕಾರ ಈ ವರ್ಷ ಅರ್ಜಿ ಪಡೆಯದೆ ಪ್ರೋತ್ಸಾಹಧನ ನಿಲ್ಲಿಸಿರುವುದರಿಂದ ದೇವಧಾನ್ಯಗಳು ಕಣ್ಮರೆಯಾಗುವ ಅಪಾಯವಿದೆ.
ಜಿಲ್ಲೆಯ 4.17 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಗೆ ಅವಕಾಶವಿದ್ದು, ಕಳೆದ ವರ್ಷ 6393 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದ್ದು, 11227 ರೈತರು ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಕೆಲವರಿಗಷ್ಟೇ ಹಣ ಬಂದಿತ್ತು. ಪ್ರಸಕ್ತ ವರ್ಷ 7000 ಹೆಕ್ಟೇರ್‌ನಲ್ಲಿ ಬೆಳೆದಿರುವ 12 ಸಾವಿರಕ್ಕೂ ಹೆಚ್ಚು ರೈತರಿಗೆ ಪ್ರೋತ್ಸಾಹ ಇಲ್ಲವಾಗಿದೆ.ವಾರ್ಷಿಕ 6 ಕೋಟಿ ರೂ. ಪ್ರೋತ್ಸಾಹಧನ ವಿತರಿಸಿದ ದಾಖಲೆ ಜಿಲ್ಲೆಯಲ್ಲಿದ್ದು ಸಿರಿಧಾನ್ಯ ಮೇಳಗಳನ್ನು ಆಯೋಜಿಸಿ ಜಿಲ್ಲೆಯ ಎಲ್ಲೆಡೆಯಿಂದ ರೈತರನ್ನು ಕರೆಸಿ ಬೆಳೆಯಲು ಪ್ರೋತ್ಸಾಹಿಸಿದ್ದ ಅಧಿಕಾರಿಗಳು ಏಕಾಏಕಿ ರೈತರನ್ನು ಕೈಬಿಟ್ಟಿದ್ದಾರೆ. ಕೊರಲೆ, ನವಣೆ, ಹಾರಕ, ಸಾಮೆ, ಊದಲು, ಬರಗು, ಸಜ್ಜೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಧನ ಘೋಷಿಸಿತ್ತು.
ಸರ್ಕಾರದಿಂದ ಸೂಚನೆ ಬರದಿರುವ ಹಿನ್ನೆಲೆಯಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಈ ವರ್ಷ ಪ್ರತ್ಯೇಕ ಪ್ರೋತ್ಸಾಹಧನ ನೀಡುತ್ತಿಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಲ್ಲಿ ರಾಗಿ, ತೊಗರಿ, ಹೆಸರು, ಹುರುಳಿ ಮತ್ತಿತರ ಬೆಳೆಗಳಿಗೆ ತಾಂತ್ರಿಕತೆ ಅಳವಡಿಸಿಕೊಳ್ಳಲು ಪ್ರಾತ್ಯಕ್ಷಿಕೆ ನೀಡುತ್ತಿದ್ದೇವೆ. ರಾಜಸುಲೋಚನ, ಜಂಟಿ ಕೃಷಿ ನಿರ್ದೇಶಕಿ, ತುಮಕೂರು ಸಿರಿಧಾನ್ಯ ಬೆಳೆಯಲು ಬೊಬ್ಬೆ ಹೊಡೆದ ಸರ್ಕಾರ, ಕೃಷಿ ಇಲಾಖೆ ಮೌನವಾಗಿರುವುದು ಆತಂಕಕಾರಿ. ಕನಿಷ್ಠ ಬೆಲೆ ಹೊಂದಿರುವ ಇವಕ್ಕೆ ಪ್ರೋತ್ಸಾಹಧನ ನೀಡಿದರಷ್ಟೇ ಬೆಳೆಯಲು ಸಾಧ್ಯ. ರೈತರ ನಷ್ಟ ಮಾಡಿಕೊಂಡು ಸಿರಿವಂತರ ಆರೋಗ್ಯಕ್ಕೆ ಬೆಳೆ ಬೆಳೆದುಕೊಡಬೇಕಾಗಿದೆ. ಸೋಮಶೇಖರ್ ರೈತ, ಮಧುಗಿರಿ