

ಕುಶಾಲನಗರ: ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಕೂಟಗಳ ಆಯೋಜನೆಗಳಿಂದ ಒಗ್ಗೂಡುವಿಕೆಯ ಮೂಲಕ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಸಹಕಾರವಾಗಲಿದೆ ಎಂದು ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ.ಗರೀಶ್ ಕುಮಾರ್ ಹೇಳಿದರು.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬಾ ಯುವಕ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಕ್ಕೆ ಕ್ರೀಡಾ ಜ್ಯೋತಿಯ ಮೂಲಕ ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ.ಗರೀಶ್ ಕುಮಾರ್ ಚಾಲನೆ ನೀಡಿ ಮಾತನಾಡಿದರು.
ಇಂತಹ ಕ್ರೀಡಾಕೂಟದಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಅನುಕೂಲವಾಗುತ್ತದೆ ಎಂದ ಅವರು, ಗ್ರಾಮ ಪಂಚಾಯತಿ ವತಿಯಿಂದ ವಿಶೇಷ ಅನುದಾನದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅವಕಾಶಗಳಿದ್ದು, ಅವುಗಳ ಬಳಕೆಗೆ ಗ್ರಾಮಸ್ಥರು, ಯುವಕರು ಮುಂದಾಗಬೇಕೆಂದು ಕರೆ ನೀಡಿದರು.
ರಾಮಲಿಂಗೇಶ್ವರ ನೀರು ಬಳಕೆದಾರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಐ.ಎಸ್.ಗಣೇಶ್ ಮಾತನಾಡಿ, ಕ್ರೀಡೆಯು ಸಾಧಕನಿಗೆ ಸ್ಫೂರ್ತಿಯಾಗಿ ಗ್ರಾಮೀಣ ಯುವಕರ ಪ್ರತಿಭೆಯನ್ನು ಗುರುತಿಸುವಿಕೆ ಮೂಲಕ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗಲಿದೆ ಎಂದರು.
ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಕೆ.ನಾಗರಾಜಶೆಟ್ಟಿ ಮಾತಾನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿನ ಆಚಾರ, ವಿಚಾರ, ಸಂಸ್ಕೃತಿಗಳ ಪರಂಪರೆಯನ್ನು ಉಳಿಸಿ ಬೆಳೆಸುವುದರ ಮೂಲಕ ಸಮಾಜಮುಖಿ ಕಾರ್ಯ ಕೈಗೊಳ್ಳಲು ಮತ್ತು ಧಾರ್ಮಿಕ ಚಿಂತನೆಗಳನ್ನು ಯುವಕರು ಮೈಗೂಡಿಸಿಕೊಳ್ಳಬಹುದು. ಇವುಗಳು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಗಳು ಪೂರಕವಾಗುತ್ತವೆ ಎಂದರು.
ಅಧ್ಯಕ್ಷತೆಯನ್ನು ಶ್ರೀ ಕಾಳಿಕಾಂಬಾ ಯುವಕ ಸಂಘದ ಅಧ್ಯಕ್ಷ ಐ.ಜೆ.ಶರತ್ ವಹಿಸಿದ್ದರು. ಕ್ರೀಡಾ ಮೈದಾನ ಮತ್ತು ವಾಲಿಬಾಲ್ ಆಟ ಉದ್ಘಾಟನೆಯನ್ನು ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ.ಚಾಮಿ ನೆರವೇರಿಸಿದರು.
ವೇದಿಕೆಯಲ್ಲಿ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯೆ ರತ್ನಮ್ಮ, ಎಚ್.ಎಸ್.ರವಿ, ಮಾಜಿ ಅಧ್ಯಕ್ಷೆ ಪ್ರೇಮಲೀಲಾ, ಶೋಭಾ ಪುಟ್ಟಪ್ಪ, ಪೋಲಿಸ್ ಅಧಿಕಾರಿ ದಿನೇಶ್, ಹುದುಗೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಕಂಚನಾ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜಳಾ, ಕಾರ್ಯದರ್ಶಿ ಪುನಿತ್, ಸೇರಿದಂತೆ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು, ನೂರಾರು ಕ್ರೀಡಾಪಟುಗಳು ಹಾಜರಿದ್ದರು.
ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಪುರುಷರ ವಾಲಿಬಾಲ್, ಕಬ್ಬಡಿ, ಮಹಿಳೆಯರಿಗೆ ಥ್ರೋಬಾಲ್, ಮತ್ತು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.