ಹೈನುಗಾರರ ಪ್ರೋತ್ಸಾಹಧನ ಹೆಚ್ಚಳಕ್ಕೆ ತೀರ್ಮಾನ; ವಿಶೇಷ ಬೆಂಬಲಕ್ಕೆ ಸರ್ಕಾರಕ್ಕೆ ಹಾಲು ಉತ್ಪಾದಕರ ಒಕ್ಕೂಟ ಮನವಿ

sucharitha shetty
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಹೈನುಗಾರರಿಗೆ ನೀಡುತ್ತಿರುವ ವಿಶೇಷ ಪ್ರೋತ್ಸಾಹಧನವನ್ನು 1 ರೂ.ನಿಂದ 1.50ಕ್ಕೆ ಹೆಚ್ಚಳ ಮಾಡಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ತೀರ್ಮಾನಿಸಿದೆ. ಪರಿಷ್ಕೃತ ಪ್ರೋತ್ಸಾಹಧನ ಜ.1ರಿಂದ ಅನ್ವಯವಾಗಲಿದೆ.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮೇವಿನ ಕೊರತೆ, ವಾತಾವರಣದ ಅಧಿಕ ಉಷ್ಣತೆ, ಪಶು ಆಹಾರ ಕೊರತೆ ಮತ್ತು ಕೂಲಿ ಕಾರ್ಮಿಕರ ತೀವ್ರ ಅಭಾವದಿಂದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹಾಲು ಉತ್ಪಾದನಾ ವೆಚ್ಚ ಅಧಿಕವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು ಹೈನುಗಾರರಿಗೆ ಲೀಟರ್‌ಗೆ 2 ರೂ.ನಿಂದ 3 ರೂ. ತನಕ ಹೆಚ್ಚು ದರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುವ ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಪ್ರಸ್ತುತ 749 ಸಂಘಗಳು ಕಾರ್ಯಾಚರಿಸುತ್ತಿದ್ದು, 51,138 ಸಕ್ರಿಯ ಸದಸ್ಯರಿಂದ ದಿನವಹಿ 3,40,158 ಲೀ. ಹಾಲು ಸಂಗ್ರಹಣೆಯಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ದಿನವಹಿ ಸರಾಸರಿ 4.01 ಲಕ್ಷ ಲೀ. ಹಾಲು, 78,000 ಕೆ.ಜಿ. ಮೊಸರು, ಮಾಸಿಕ 75 ಟನ್ ಪನೀರ್, ತುಪ್ಪ 153 ಟನ್, 1 ಟನ್ ಒಕ್ಕೂಟದ ಸಿಹಿ ಉತ್ಪನ್ನ ಮತ್ತು ಸುವಾಸಿತ ಹಾಲು, 2 ಟನ್ ಕಹಾಮ ಸಿಹಿ ಉತ್ಪನ್ನ ಒಕ್ಕೂಟದಲ್ಲಿ ಮಾರಾಟವಾಗುತ್ತಿದೆ. ಕೊರತೆಯಾದ ಹಾಲನ್ನು ಅವಶ್ಯಕತೆಗನುಗುಣವಾಗಿ ಇತರ ಒಕ್ಕೂಟಗಳಿಂದ ಖರೀದಿಸಲಾಗುತ್ತಿದೆ ಎಂದರು.

ಅದೇ ರೀತಿ ಸಂಘದ ಮಾರ್ಜಿನ್ 80 ಪೈಸೆಯಿಂದ 1.05 ರೂ.ಗೆ, ರೈತ ಕಲ್ಯಾಣ ಟ್ರಸ್ಟ್ ವಂತಿಗೆ 5 ಪೈಸೆಯಿಂದ 10 ಪೈಸೆ, ಪ್ರತೀ 0.1 ಫ್ಲಾೃಟ್ ದರ 17 ಪೈಸೆಯಿಂದ 20 ಪೈಸೆ, 4.5 ಫ್ಯಾಟ್ - 8.5 ಎಸ್‌ಎನ್‌ಎಫ್ ರೈತರಿಗೆ ನೀಡುವ ದರವನ್ನು 36.74ರಿಂದ 36.95ಕ್ಕೆ ಏರಿಸಲಾಗಿದೆ ಎಂದು ತಿಳಿಸಿದರು.

ಒಕ್ಕೂಟ ಹೈನುಗಾರರ ಹಿತಾಸಕ್ತಿ ಕಾಪಾಡಲು ಈಗಾಗಲೇ ವಿವಿಧ ಯೋಜನೆಗಳಾದ ರಾಸು ವಿಮೆ ಶೇ.75ರ ಅನುದಾನದಲ್ಲಿ, ಹೆಣ್ಣು ಕರು ಸಾಕಾಣಿಕೆ ಯೋಜನೆ, ಹಸಿರು ಮೇವು ಯೋಜನೆ, ವಾಣಿಜ್ಯ ಡೇರಿ ಘಟಕ, ಹೊರ ಜಿಲ್ಲೆ, ರಾಜ್ಯದಿಂದ ರಾಸು ಖರೀದಿಸಿದಲ್ಲಿ ಸಾಗಾಣಿಕೆ ವೆಚ್ಚ, ಹಾಲು ಹೆಚ್ಚಳ ಕಾರ್ಯಕ್ರಮ, ರೈತರು ಮರಣ ಹೊಂದಿದಾಗ, ದನ ಕಳ್ಳತನ, ಹಟ್ಟಿ ಹಾನಿಗೆ ಪರಿಹಾರ ಇತ್ಯಾದಿ ಅನುದಾನಗಳನ್ನು ಒಕ್ಕೂಟದ ಮೂಲಕ ನಿರಂತರ ನೀಡಲಾಗುತ್ತಿದೆ. ಡಿಸೆಂಬರ್ ಮಾಹೆಯ ಅಂತ್ಯದವರೆಗೆ ಅಂದಾಜು 870 ಕೋಟಿ ರೂ.ನಷ್ಟು ವ್ಯವಹಾರ ಮಾಡಿ, 7.76 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆಯಿದೆ ಎಂದರು.

ಹಾಲು ಒಕ್ಕೂಟದ ಎಂ.ಡಿ.ವಿವೇಕ್ ಡಿ., ಒಕ್ಕೂಟದ ಉಪಾಧ್ಯಕ್ಷ ಜಯರಾಮ್ ರೈ, ದಿವಾಕರ್ ಶೆಟ್ಟಿ ಕಾಪು, ನಿರ್ದೇಶಕರಾದ ನಾರಾಯಣ ಪ್ರಕಾಶ್, ಮಹಿಳಾ ಪ್ರತಿನಿಧಿ ಸವಿತಾ ಶೆಟ್ಟಿ, ಸದಾಶಿವ ಶೆಟ್ಟಿ, ನರಸಿಂಹ ಕಾಮತ್, ಸುಧಾಕರ್ ರೈ, ಮಾಜಿ ಅಧ್ಯಕ್ಷ ರವಿರಾಜ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿದ್ದರು.

----

ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಹಾಗೂ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಪ್ರಸ್ತುತ ಮಾಹೆಯಾನ 600 ಮೆ.ಟನ್ ರಸಮೇವನ್ನು ಸಂಘಗಳಿಗೆ ಪ್ರತಿ ಕೆ.ಜಿ.ಗೆ 7.50 ರೂ.ನಂತೆ ಒದಗಿಸಲಾಗುತ್ತಿದೆ. ಉತ್ತಮ ರಾಸುಗಳಿಗಾಗಿ ದಕ್ಷಿಣ ಭಾರತದ ಈರೋಡ್‌ನಲ್ಲಿ ಕಡಿಮೆ ದರದಲ್ಲಿ ಉತ್ತಮ ತಳಿಯ ಜಾನುವಾರುಗಳು ಲಭ್ಯವಿರುವುದನ್ನು ಗುರುತಿಸಿ ಹೈನುಗಾರರಿಗೆ ಅವರ ಬೇಡಿಕೆಗೆ ಅನುಗುಣವಾಗಿ ರಾಸುಗಳನ್ನು ಖರೀದಿಸಿ ವಿತರಿಸಲು ಕ್ರಮವಿಡಲಾಗುತ್ತಿದ್ದು, ಪ್ರತಿ ರಾಸುವಿಗೆ ಸಾಗಾಟ, ವಿಮೆ, ಉಚಿತ ಪಶು ಆಹಾರಕ್ಕಾಗಿ 16 ಸಾವಿರ ರೂ. ಅನುದಾನ ನೀಡಲಾಗುತ್ತಿದೆ.

ಸುಚರಿತ ಶೆಟ್ಟಿ, ಅಧ್ಯಕ್ಷ, ದ.ಕ. ಹಾಲು ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net