

ಧಾರವಾಡ: ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಇಸ್ರೋ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ವಿಜ್ಞಾನಿಗಳಿಗೆ ಅಭಿನಂದಿಸಿದ್ದಾರೆ. ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಸ್ವಪಕ್ಷದವರನ್ನು ದೂರ ಇಟ್ಟ ವಿಚಾರವಾಗಿ ಪ್ರತಿಕ್ರಿಯಿಸಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ದೇಶ ಹಿಟ್ಲರ್ ಆಡಳಿತದಲ್ಲಿದೆ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.
ಧಾರವಾಡ ಹೊರವಲಯದಲ್ಲಿ ಈ ಕುರಿತು ಮಾತನಾಡಿದ ವಿನಯ್ ಕುಲಕರ್ಣಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಭಾರತ ದೇಶ ಹಿಟ್ಲರ್ ಆಡಳಿತಕ್ಕೆ ಒಳಪಡುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಅದು ಜಾರಿಯಾಗಬಹುದು. ಈ ಬಗ್ಗ ಮಾತನಾಡಿದರೆ ನಾವು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಜನರು ಎಚ್ಚೆತ್ತುಕೊಳ್ಳಬೇಕು. ಇವತ್ತು ಸ್ವಪಕ್ಷದವರಿಗೆ ಈ ರೀತಿಯಾದರೆ ವಿರೋಧ ಪಕ್ಷದವರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.
ತೆರಗಿ ಸಂದಾಯದಲ್ಲಿ ಕರ್ನಾಟಕ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ. ಆದರೆ, ಕೇಂದ್ರ ಸರ್ಕಾರ ನಮಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ. ಅಕ್ಕಿ ವಿಚಾರದಲ್ಲೂ ಈ ರೀತಿ ಮಾಡಲಾಗುತ್ತಿದ್ದು, ಹಣ ಕೊಡುತ್ತೇವೆ ಎಂದರು ಅವರು ಅಕ್ಕಿ ಕೊಡಲು ಸಿದ್ದರಿಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.