ಕನಿಷ್ಟ ಬದುಕು ನಡೆಸುತ್ತಿರುವ ಬಲಿಜ ಸಮುದಾಯ: ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಹೇಳಿಕೆ

Inauguration of Yoginarayana, Krishnadevaraya Youth Union mandya
Published on

ಮಂಡ್ಯ: ಬಲಿಜ ಸಮುದಾಯಕ್ಕೆ ಸಾಮಾಜಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ದೊಡ್ಡ ಅನ್ಯಾಯವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಟ ಬದುಕು ನಡೆಸುತ್ತಿದ್ದಾರೆ. ಇದಕ್ಕೆ ನಮಗೆ ಮೀಸಲಾತಿಯಲ್ಲಿ ವಂಚನೆಯಾಗಿರುವುದೇ ಕಾರಣ ಎಂದು ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಬೇಸರ ವ್ಯಕ್ತಪಡಿಸಿದರು.

ನಗರದ ರೈತ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಯೋಗಿನಾರಾಯಣ, ಕೃಷ್ಣದೇವರಾಯ ಯುವ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಲಿಚಕ್ರವರ್ತಿಯ ಕುಲದವರು ನಾವು. ನಮ್ಮಲ್ಲಿ ಮಹಾನ್ ಚಕ್ರವರ್ತಿಗಳು ಇರುವಂತೆ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಿರುವವರೆಗೂ ನಮ್ಮ ಸಮಾಜ ವಿವಿಧ ಹಂತಗಳಲ್ಲಿ ಬದುಕು ಕಂಡುಕೊಂಡಿದೆ. ಯುವಜನತೆ ನಮಗಾಗಿರುವ ಅನ್ಯಾಯವನ್ನು ಈಗಲಾದರೂ ಸರಿಪಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಇಂದು ನಮ್ಮ ಸಮುದಾಯದ ಯುವ ಕ್ರಿಯಾಶೀಲ ಶಕ್ತಿಗಳು ಒಟ್ಟಾಗಿ ಒಕ್ಕೂಟ ನಿರ್ಮಿಸಿಕೊಂಡು ಸಮುದಾಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವುದು ಬಹಳ ಸಂತಸ ತಂದಿದೆ. ಇದುವರೆಗೆ 2ಎ ಮೀಸಲಾತಿಯನ್ನು ಉದ್ಯೋಗ ಕ್ಷೇತ್ರಕ್ಕೆ ವಿಸ್ತರಿಸಿ ಎಂದು ನಾವು ಆಳುವವರಿಗೆ ಪರಿಪರಿಯಾಗಿ ಕೇಳಿಕೊಂಡರೂ ಯಾರೂ ಪುರಸ್ಕರಿಸಿಲ್ಲ. ಕಾರಣ ನಮ್ಮಲ್ಲಿ ಬಲಿಷ್ಟವಾದ ನಾಯಕತ್ವವಿಲ್ಲ ಎಂಬ ನಿರ್ಲಕ್ಷ್ಯ ಮನೋಭಾವ ರಾಜಕಾರಣಿಗಳಲ್ಲಿದೆ ಎಂದು ತಿಳಿಸಿದರು.

ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನಾಯ್ಡು ಮಾತನಾಡಿ, ಬಲಿಜ ಸಮುದಾಯ ಅಲೆಮಾರಿಗಳಿಗಿಂತಲೂ ಕಡೆಯದಾಗಿ ಬದುಕುತ್ತಿರುವ ಚಿತ್ರಣವನ್ನು ನಾವು ಗ್ರಾಮೀಣ ಪ್ರದೇಶದಲ್ಲಿ ಕಾಣಬಹುದು. ಸಾಮಾಜಿಕವಾಗಿ ಬಹಳ ಹಿಂದೆ ಉಳಿದಿದ್ದೇವೆ. ಆದರೆ, ನಮ್ಮ ಸಮುದಾಯದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಯಾವುದೇ ಕೆಲಸವನ್ನು ಮಾಡುವ ಛಲಗಾರರಿದ್ದಾರೆ. ರಾಜ್ಯದ ಯಾವ ಇಲಾಖೆಯ ಕಚೇರಿಯಲ್ಲೂ ನಮ್ಮ ಸಮುದಾಯದ ಅಧಿಕಾರಿಗಳಿಲ್ಲ ಎಂಬುದು ಬಹಳ ನೋವಿನ ಸಂಗತಿ. ಹಾಗಾಗಿ ಯುವ ಶಕ್ತಿ 2ಎ ಮೀಸಲನ್ನು ಉದ್ಯೋಗ ಕ್ಷೇತ್ರಕ್ಕೆ ತರಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಆರ್.ವಿ.ದೇವರಾಜ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಆರ್.ವಿ.ಮಮತಾ ದೇವರಾಜ್ ಅವರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮುದಾಯದವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಹಸ್ತಮುದ್ರೆ ತಜ್ಞ ಡಾ.ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಸಾನಿಧ್ಯ ವಹಿಸಿದ್ದರು. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಭಾರತ ಬಲಿಜ ಒಕ್ಕೂಟದ ದಾಸರಿ ರಾಮನ್, ಬಳ್ಳಾರಿ ಹೋರಾಟಗಾರರಾದ ಟಪಾಲ್ ಗಣೇಶ್, ರಾಜ್ಯ ಕೃಷ್ಣದೇವರಾಯ ಬಲಿಜ ಸಂಘದ ಪ್ರಧಾನ ಸಂಚಾಲಕ ಡಾ.ಶಿರಾ ಗೋವಿಂದಪ್ಪ, ಒಕ್ಕೂಟದ ರಾಜ್ಯಾಧ್ಯಕ್ಷ ಗಿರೀಶ್ ಲಕ್ಷ್ಮೀ ನಾರಾಯಣ್, ಪ್ರಧಾನ ಕಾರ್ಯದರ್ಶಿ ಎಸ್.ಕಾರ್ತಿಕ್, ಬಲಿಜ ವಾರ್ತೆ ಸಂಪಾದಕ ಡಾ.ಕೆ.ಎನ್.ವಿಜಯ್‌ಕೊಪ್ಪ, ಪೂರ್ಣಿಮಾ, ಸುರೇಂದ್ರಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net