11ಕ್ಕೆ ಯರಗೋಳ್​ ಡ್ಯಾಂ ಉದ್ಘಾಟನೆ

Published on

14 ವರ್ಷಗಳ ಬಳಿಕ ಜಂಜಾಟಕ್ಕೆ ಮುಕ್ತಿ

ಕೋಲಾರ: ಕೋಲಾರ, ಬಂಗಾರಪೇಟೆ, ಮಾಲೂರು ಪಟ್ಟಣ ಹಾಗೂ 45 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ನಿಮಾರ್ಣವಾಗಿರುವ ಯರಗೋಳ್​ ಡ್ಯಾಂ ಉದ್ಘಾಟನೆ ಭಾಗ್ಯ 14 ವರ್ಷಗಳ ನಂತರ ಈಡೇರುವ ಮೂಲಕ ಯರಗೋಳ್​ ಡ್ಯಾಂ ಸಮಸ್ಯೆ ನಿವಾರಣೆಯಾದಂತಾಗಿದೆ.
ಯರಗೋಳ್​ ಸುತ್ತಮುತ್ತಲಿನ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ ಎಂದು ಅಲ್ಲಿನ ಶಿಕ್ಷಕ ಚಂದ್ರಶೇಖರ್​ ಮಾಧ್ಯಮಗಳ ಗಮನ ಸೆಳೆದಿದ್ದರು. ಆಗಿನ ಕೋಲಾರ ನಗರಸಭೆ ಸದಸ್ಯ ದಿ.ತ್ಯಾಗರಾಜ್​
ಮತ್ತು ಇಂಜಿನಿಯರ್​ ರವಿ ಅವರ ಪರಿಶ್ರಮದಿಂದಲೇ ಇಂದು ಯರಗೋಳ್​ ಡ್ಯಾಂ ನಿಮಾರ್ಣಗೊಂಡಿದೆ. ನ.11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಳ್ಳಲು ಸಿದ್ಧವಾಗಿದೆ.
2006ರಲ್ಲಿ ಯರಗೋಳ್​ ಡ್ಯಾಂ ನಿಮಾರ್ಣಕ್ಕೆ ಆಗಿನ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಯಡಿಯೂರಪ್ಪ ಅವರ ಅವಧಿಯಲ್ಲಿ ಡಿ.ಪಿ.ಆರ್​. ತಯಾರಿಸಿ ಬಜೆಟ್​ನಲ್ಲಿ 10 ಕೋಟಿ ರೂ.ಗಳನ್ನು ಮೀಸಲಿಡಲಾಯಿತು. 2008ರ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಯರಗೋಳ್​ ಡ್ಯಾಂ ನಿಮಾರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆಗಿನ ಯೋಜನೆಯ ಅಂದಾಜು ಮೊತ್ತ 360 ಕೋಟಿ ರೂ. ಆಗಿತ್ತು. ಹೈದರಾಬಾದ್​ ಮೂಲದ ಗುತ್ತಿಗೆದಾರರಿಗೆ ಡ್ಯಾಂ ನಿಮಾರ್ಣ ಕಾಮಗಾರಿ ವಹಿಸಲಾಗಿತ್ತು. ನಂತರ ಬಂದ
ಸರ್ಕಾರದಲ್ಲಿ ಇದರ ಯೋಜನೆಯ ಮೊತ್ತ 850 ಕೋಟಿ ರೂ. ಆಯಿತು. 2010ಕ್ಕೆ ಯೋಜನೆಯ ಮೊತ್ತ ಬರೋಬ್ಬರಿ 1,000 ಕೋಟಿ ರೂ. ದಾಟಿತ್ತು.
2008ರಲ್ಲಿ ಕೋಲಾರ ಶಾಸಕ ವರ್ತೂರು ಪ್ರಕಾಶ್​ ಒಳಚರಂಡಿ ಮತ್ತು ನೀರು ಸರಬರಾಜು ಯೋಜನೆ ನಿಗಮ ಮಂಡಳಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಯರಗೋಳ್​ ಡ್ಯಾಂನಿಂದ ಕೋಲಾರತನಕ ಪೈಪ್​ಲೈನ್​ಗಾಗಿ 80 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿ, ಪೈಪ್​ ಲೈನ್​ ಅಳವಡಿಸಿದರು. ಡ್ಯಾಂ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಪೈಪ್​ಲೈನ್​ ಅವಶ್ಯಕತೆ ಇದೆಯೇ, ಇದು ಅಪ್ರಸ್ತುತ ಎಂಬ ಆರೋಪ ಕೇಳಿ ಬಂದಿತಾದರೂ ಈಗ ಪ್ರಸ್ತುತವಾಗಿದೆ.
ಅಂತೂ 2019ರಲ್ಲಿ ಡ್ಯಾಂ ನಿಮಾರ್ಣ ಕಾಮಗಾರಿ ಪೂರ್ಣಗೊಂಡಿತು. 2022ಕ್ಕೆ ಡ್ಯಾಂ ಸಂಪೂರ್ಣ ನೀರು ತುಂಬಿತು. ಆಗಲೇ ಉದ್ಘಾಟನೆ ಆಗಬೇಕಿದ್ದ ಡ್ಯಾಂ ಈಗ ಉದ್ಘಾಟನೆಯಾಗುತ್ತಿದೆ. ಯರಗೋಳ್​ ಡ್ಯಾಂ ನಿಮಾರ್ಣವಾಗಿ ನೀರಿದ್ದರೂ ಕುಡಿಯುವ ನೀರು ಪೂರೈಸುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದವು.
ಸುಮಾರು 150 ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ಡ್ಯಾಂ ನಿಮಾರ್ಣಗೊಂಡಿದೆ. ಪ್ರಾರಂಭದಲ್ಲಿ ಡ್ಯಾಂ ನಿಮಾರ್ಣಕ್ಕೆ ರೈತರ ಜಮೀನು ನೀಡದೆ ಪ್ರತಿಭಟನೆ ನಡೆಸಿದ್ದರು. ಎಲ್ಲ ಅಡೆತಡೆಗಳು ನಿವಾರಣೆಗೊಂಡು ಒಂದು ನಗರಸಭೆ ಎರಡು ಪುರಸಭೆ ಮತ್ತು 45 ಗ್ರಾಮಗಳ ವ್ಯಾಪ್ತಿಗೆ ಕುಡಿಯುವ ನೀರಿನ ಯೋಜನೆ ನ.11ಕ್ಕೆ ಉದ್ಘಾಟನೆಗೊಳ್ಳುತ್ತಿದೆ. ಕೆ.ಜಿ.ಎಫ್​.ಭಾಗದಿಂದಲೇ ಯರಗೋಳ್​ ಡ್ಯಾಂಗೆ ನೀರು ಬರುತ್ತಿರುವುದರಿಂದ ಕೆ.ಜಿ.ಎಫ್​.ನಗರಕ್ಕೂ ಮತ್ತು ಮುಳಬಾಗಿಲು ಪಟ್ಟಣಕ್ಕೂ ನೀರು ಕೊಡಿ ಎಂದು ಆ ಭಾಗದ ಶಾಸಕರು ಬೇಡಿಕೆ ಇಟ್ಟಿದ್ದಾರೆ.

ಅನುಮತಿ ಪಡೆಯದೆ ಕಾಮಗಾರಿ
ಕೇಂದ್ರ ಸರ್ಕಾರದ ಹಸಿರು ನ್ಯಾಯ ಮಂಡಳಿ ಮತ್ತು ಅರಣ್ಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದು ಕೆಲವು ದಿನಗಳ ಕಾಲ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಆಗಿನ ಪ್ರಧಾನಮಂತ್ರಿ ಮನಮೋಹನ್​ಸಿಂಗ್​ ಬಳಿಗೆ ಶಾಸಕರಾದ ಶ್ರೀನಿವಾಸಗೌಡ, ರಮೇಶ್​ಕುಮಾರ್​ ನೇತೃತ್ವದಲ್ಲಿ ಕೋಲಾರ ಶಾಸಕರ ನಿಯೋಗ ತೆರಳಿ ಹಸಿರು ನ್ಯಾಯ ಮಂಡಳಿ ಮತ್ತು ಅರಣ್ಯ ಹಾಗೂ ಗಣಿ ಮತ್ತು ಭೂವಿಜ್ಞಾನ ಮಂಡಳಿಯಿಂದ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಿದರು.

ಉದ್ಘಾಟನೆಗೆ ರಾಜಕೀಯ ಪಟ್ಟು
ಯರಗೋಳ್​ ಡ್ಯಾಂ ಉದ್ಘಾಟನೆಗೆ ರಾಜಕೀಯ ವಾಸನೆ ಅಂಟಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರನ್ನು ಕರೆಸಲೇಬೇಕೆಂದು ಜೆಡಿಎಸ್​ ಮತ್ತು ಬಿಜೆಪಿ ಮುಖಂಡರು ಪಟ್ಟು ಹಿಡಿದಿದ್ದಾರೆ. ಉದ್ಘಾಟನೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ಯಾರನ್ನು ಕರೆದಿದೆ ಎಂಬುದು ಇನ್ನೂ ನಿಗೂಢವಾಗಿದೆ.

ವಿಸ್ತೀರ್ಣ : ಡ್ಯಾಂ 150 ಎಕರೆ ಪ್ರದೇಶದಲ್ಲಿದ್ದು, ಉದ್ದ 411 ಮೀಟರ್​, ಎತ್ತರ 40 ಮೀಟರ್​, ನೀರಿನ ಸಾಮರ್ಥ್ಯ 500 ಎಂ.ಸಿ.ಎಫ್​.ಟಿ (ಮಿಲಿಯನ್​ ಕ್ಯೂಬಿಕ್​ ಫೀಟ್​ ವಾಟರ್​) ಸಂಗ್ರಹ ಸಾಮರ್ಥ್ಯ ಹೊಂದಿದೆ.

ಮಳೆ ನೀರೇ ಆಶ್ರಯ
ಮಾರ್ಕಂಡೇಯ ಡ್ಯಾಂ ಸೇರಿ 7 ಕೆರೆಗಳು ತುಂಬಿ ಯರಗೋಳ್​ ಡ್ಯಾಂಗೆ ನೀರು ಬರಬೇಕಾಗಿದೆ. ಕಳೆದ ವರ್ಷ ನೀರು ತುಂಬಿದೆ. ಈ ವರ್ಷ ಮಳೆ ಇಲ್ಲದ ಕಾರಣ ನೀರು ಇಲ್ಲ. 7 ಕೆರೆಗಳಲ್ಲಿಯೂ ನೀರು ಇಲ್ಲದೇ ಇರುವುದರಿಂದ ಯರಗೋಳ್​ ಡ್ಯಾಂಗೆ ಮಳೆ ಬಂದರೆ ಮಾತ್ರ ಈ ಬಾರಿ ನೀರು ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net